ADVERTISEMENT

ಕಾಂಗ್ರೆಸ್‌ಗೆ ಒಲಿದ ನಗರಸಭೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 10:30 IST
Last Updated 14 ಸೆಪ್ಟೆಂಬರ್ 2013, 10:30 IST

ದಾಂಡೇಲಿ: ಇಲ್ಲಿಯ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದು, ಅಧ್ಯಕ್ಷರಾಗಿ ದೀಪಾ ಮಾರಿಹಾಳ ಹಾಗೂ ಉಪಾಧ್ಯಕ್ಷರಾಗಿ ಅನಿಲ ದಂಡಗಲ್‌ ಆಯ್ಕೆಯಾದರು.

ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿ ನಗರಸಭೆ ಸದಸ್ಯರಾಗಿ (16ನೇ ವಾರ್ಡ್‌) ಚುನಾಯಿತರಾದ ಕಾಂಗ್ರೆಸ್‌ನ ದೀಪಾ ಮಾರಿಹಾಳ ಹಾಗೂ 4ನೇ ವಾರ್ಡ್‌ನ ಜೆಡಿಎಸ್‌ ನಗರಸಭಾ ಸದಸ್ಯೆ ಸುಶೀಲಾ ಕಾಸರಗೋಡ ಸ್ಪರ್ಧಿಸಿದ್ದರು. ಸುಶೀಲಾ ಕಾಸರಗೋಡ ಅವರು 13ಮತಗಳು ಪಡೆದರೆ, ದೀಪಾ ಮಾರಿಹಾಳ ಅವರು 18 ಮತಗಳನ್ನು ಪಡೆದು ನೂತನ ಅಧ್ಯಕ್ಷೆಯಾಗಿ ಚುನಾಯಿತರಾದರು.

ಪರಿಶಿಷ್ಟ ಜಾತಿಯ ಅಭ್ಯರ್ಥಿಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ 11ನೇ ವಾರ್ಡ್‌ನ ಸದಸ್ಯೆ ಜೆಡಿಎಸ್‌ನ ಸುಲೋಚನಾ ಸರ್‌ನಾಯಕ ಅವರು 13 ಮತಗಳನ್ನು ಪಡೆದರೆ, 10ನೇ ವಾರ್ಡ್‌ನ ಸದಸ್ಯ ಕಾಂಗ್ರೆಸ್‌ನ ಅನಿಲ ದಂಡಗಲ್ 17 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಚುನಾಯಿತರಾದರು.

ಇತ್ತೀಚೆಗೆ 2ನೇ ವಾರ್ಡ್‌ನ ಸದಸ್ಯೆ ರೇಣುಕಾ ಉಪ್ಪಾರ ನಿಧನರಾಗಿದ್ದು, ಒಟ್ಟು 31 ವಾರ್ಡ್‌ಗಳ ಸದಸ್ಯರ ಪೈಕಿ 30 ವಾರ್ಡ್‌ಗಳ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು. ಚುನಾವಣಾ ಅಧಿಕಾರಿಯಾಗಿ ಕಾರವಾರದ ಉಪವಿಭಾಗಾಧಿಕಾರಿ ಪುಷ್ಪಲತಾ ಕಾರ್ಯನಿರ್ವಹಿಸಿದರು.  ಚುನಾವಣಾ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದ ಸಚಿವ ಆರ್.ವಿ. ದೇಶಪಾಂಡೆ ಅವರು ಚುನಾಯಿತರಾದ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

‘ಪಕ್ಷಾತೀತ ಆಡಳಿತ’
ನಗರದ ಅಭಿವೃದ್ಧಿ ಹಾಗೂ ಬಡವರ ಸೇವೆ ಗುರಿಯಾಗಿಟ್ಟುಕೊಂಡು ಪಕ್ಷಾತೀತ ಹಾಗೂ ಶುದ್ಧ ಆಡಳಿತವನ್ನು ನಾವು ನೀಡುತ್ತೇವೆ. ಅದಕ್ಕಾಗಿ ಎಲ್ಲರ ಸಹಕಾರ ನಮಗೆ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹಳಿಯಾಳಕ್ಕೆ 5 ಕೋಟಿ, ದಾಂಡೇಲಿಗೆ ರೂ 10 ಕೋಟಿ ರೂಪಾಯಿ ಅನುದಾನದ ಅಭಿವೃದ್ಧಿ ಕಾಮಗಾರಿ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಆಗಿದೆ. ಮಳೆಗಾಲದ ನಂತರ ಕಾಮಗಾರಿಯನ್ನು ಆರಂಭಿಸುತ್ತೇವೆ. ಸಚಿವ ಆರ್.ವಿ. ದೇಶಪಾಂಡೆ ಅವರ ಉದ್ದೇಶದಂತೆ ನಗರದಲ್ಲಿ ಶೈಕ್ಷಣಿಕ ಹಾಗೂ ಪ್ರವಾಸೋದ್ಯಮದ ಬೆಳವಣಿಗೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ತಂಗಳ, ಹಿರಿಯ ಸದಸ್ಯರಾದ ನಾಗೇಶ ಸಾಳುಂಕೆ, ಯಾಸ್ಮಿನ್ ಕಿತ್ತೂರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.