ADVERTISEMENT

ಕಾಮಗಾರಿ ಕೈಗೊಳ್ಳದೆ ಹಣ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 12:05 IST
Last Updated 9 ಫೆಬ್ರುವರಿ 2011, 12:05 IST

ಕೆಡಿಪಿ ಸಭೆಯಲ್ಲಿ ಸಾರ್ವಜನಿಕರ ಆರೋಪ
ಮುಂಡಗೋಡ: ತಾಲ್ಲೂಕಿನಲ್ಲಿ ಜಲಾನಯನ ಇಲಾಖೆಯು  ಕಳೆದ ವರ್ಷ ಯಾವುದೇ ಕಾಮಗಾರಿ ಕೈಗೊಳ್ಳದೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ ಪ್ರಸಂಗ ಇಲ್ಲಿಯ ತಾ.ಪಂ.ಸಭಾಭವನದಲ್ಲಿ ಮಂಗಳವಾರ ನಡೆದ ಕೆ.ಡಿ.ಪಿ.ಸಭೆಯಲ್ಲಿ ಜರುಗಿತು.ಉಪವಿಭಾಗಾಧಿಕಾರಿ ಜಿ.ಜಗದೀಶ ಅವರ ಅಧ್ಯಕತೆಯಲ್ಲಿ ಜರುಗಿದ ಸಭೆಯಲ್ಲಿ ‘ಜಲಾನಯನ ಇಲಾಖೆಗೆ ಯಾವದೇ ಅನುದಾನ ಬಂದಿಲ್ಲ ಹಾಗಾಗಿ ಯಾವದೇ ಕಾಮಗಾರಿಯನ್ನು ಮಾಡಿಲ್ಲ ಎಂದು ಅಧಿಕಾರಿಗಳು ಎಲ್ಲ ಕೆ.ಡಿ.ಪಿ.ಸಭೆಗಳಲ್ಲಿ ಹೇಳುತ್ತಾ ಬಂದಿದ್ದಾರೆ.  ಹೀಗಿದ್ದು ಕೊನೆಯ ಹಂತದಲ್ಲಿ ಬಂದ ಹಣವನ್ನು ಕಾಮಗಾರಿಗೆ ಬಳಸದೆ ಬಿಡುಗಡೆ ಮಾಡಿಕೊಂಡು ಇಲ್ಲಿಂದ ವರ್ಗವಾಗಿ ಹೋಗಿದ್ದಾರೆ ಎಂದು ಸಾರ್ವಜನಿಕರು ಸಭೆಯಲ್ಲಿ ಆರೋಪಿಸಿದರು.

ಕಳೆದ ವರ್ಷ ಮಾಡಿರುವ ಕಾಮಗಾರಿಗಳ ವಿವರವನ್ನು ತಾ.ಪಂ.ಕಾ.ನಿ.ಅ ಹಾಗೂ ತಹಸೀಲ್ದಾರರಿಗೆ ನೀಡಿ ಅದನ್ನು ಪರಿಶೀಲಿಸಲಾಗುವುದು ಎಂದು ಎ.ಸಿ.ಯವರು ಜಲಾನಯನ ಇಲಾಖೆಯ ಹೆಗಡೆಯವರಿಗೆ ಸೂಚಿಸಿದರು.ಮುಂಡಗೋಡ -ಶಿರಸಿ ರಸ್ತೆ ಅಗಲೀಕರಣ ಕಾಮಗಾರಿಯ ಗುಣಮಟ್ಟದ ಬಗ್ಗೆ ಹಲವು ಸಲ ತಿಳಿಸಿದರೂ ತರಾತುರಿಯಲ್ಲಿ ಕಾಮಗಾರಿ ಮುಗಿಸಲಾಗಿದೆ. ಈಗ ರಸ್ತೆ ಹಾಳಾಗಿದೆ ಎಂದು ಎ.ಸಿ.ಯವರು ಲೋಕೋಪಯೋಗಿ ಇಲಾಖೆಯ ಅಭಿಯಂತರ ಮಂಜುನಾಥ ಅವರನ್ನು ಪ್ರಶ್ನಿಸಿದರು. ಆ ಕಾಮಗಾರಿಗೆ ಯಾವದೇ ಹಣ ನೀಡಿಲ್ಲ. ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು ಇನ್ನೊಂದು ವಾರದಲ್ಲಿ ಮರುಡಾಂಬರೀಕರಣ ಮಾಡಲು ಒಪ್ಪಿದ್ದಾರೆ ಎಂದು ಅಭಿಯಂತರು ಸಭೆಗೆ ತಿಳಿಸಿದರು.

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಚಿಕ್ಕಮಕ್ಕಳಿಗೆ ಯಾವುದೇ ಸ್ಫರ್ಧಾತ್ಮಕ ಪರೀಕ್ಷೆ ನಡೆಸಬಾರದು. ಈ ಸಲದ ನವೋದಯ ಆಯ್ಕೆಯಲ್ಲಿ ಸ್ಫರ್ಧಾತ್ಮಕ ಪರೀಕ್ಷೆ ಇರುವದಿಲ್ಲ ಎಂದು ಎ.ಸಿ.ಯವರು ಸಭೆಗೆ ತಿಳಿಸಿದರು. ಸರ್ಕಾರದಿಂದ ಸಹಾಯಧನ ಪಡೆದು ಕೃಷಿ ಉದ್ದೇಶ ಹೊರತುಪಡಿಸಿ ಇಟ್ಟಿಗೆ ತಯಾರಿಸಲು, ಕಲ್ಲುಕ್ವಾರಿಗೆ ಉಪಯೋಗಿಸುತ್ತಿರುವ ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್‌ಗಳನ್ನು ವಶಪಡಿಸಿಕೊಳ್ಳಲು ತಹಸೀಲ್ದಾರರಿಗೆ ಉಪವಿಭಾಗಾಧಿಕಾರಿಗಳು ಸೂಚಿಸಿದರು.

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ತಾ.ಪಂ. ಹಾಗೂ ಜಿ.ಪಂ.ನಿಂದ ಕಟ್ಟುತ್ತಿರುವ ಕಟ್ಟಡಗಳ ಬಗ್ಗೆ ಇಲಾಖೆಗೆ ಯಾವದೇ ಮಾಹಿತಿ ನೀಡುವದಿಲ್ಲ. ಕಾಮಗಾರಿ ಮುಗಿದ ಮೇಲೆ ಪತ್ರ ಕೇಳಲು ಬರುತ್ತಾರೆ ಎಂದು ಆರೋಗ್ಯಾಧಿಕಾರಿ ಡಾ.ಮಾಯಣ್ಣವರ ಸಭೆಗೆ ತಿಳಿಸಿದರು. ಇನ್ನು ಮುಂದೆ ನಿಮ್ಮ ಅನುಮತಿ ಇಲ್ಲದೆ ಕಟ್ಟಡ ಕಟ್ಟಲು ಅವಕಾಶ ನೀಡಬೇಡಿ. ಅಂದಾಜು ಪತ್ರಿಕೆಯ ಪ್ರಕಾರ ಕೆಲಸವಾದರೆ ಮಾತ್ರ ಪತ್ರ ನೀಡಿ ಎಂದು ಎ.ಸಿ.ಯವರು ಸೂಚಿಸಿದರು.

ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ ರಿಜಿಸ್ಟ್ರರ್ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಒಂದು ವಾರದಲ್ಲಿ ಅವುಗಳನ್ನು ಪರಿಶೀಲಿಸಲಾಗುವದು ಎಂದ ಎ.ಸಿ. ಪಂಚಾಯಿತಿ ನೋಡೆಲ್ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸಬೇಕು ಇಲ್ಲವಾದರೆ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡಲಾಗುವದು ಎಂದು ಎಚ್ಚರಿಸಿದರು.
ತಹಸೀಲ್ದಾರ ಎಂ.ವಿ.ಕಲ್ಲೂರಮಠ, ತಾ.ಪಂ.ಕಾ.ನಿ.ಅ. ವಿ.ಆರ್.ಬಸನಗೌಡ್ರ ಇನ್ನಿತರು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.