ADVERTISEMENT

ಕಾರವಾರದಲ್ಲಿ ಸ್ಕೂಬಾ ಡೈವಿಂಗ್‌

ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ; ಸ್ವಚ್ಛ ನೀರು ಸ್ಕೂಬಾ ತರಬೇತಿಗೆ ಸೂಕ್ತ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 9:20 IST
Last Updated 21 ಡಿಸೆಂಬರ್ 2017, 9:20 IST
ಸ್ಕೂಬಾ ಡೈವಿಂಗ್‌ನಲ್ಲಿ ತೊಡಗಿರುವ ಪ್ರವಾಸಿ. (ಸಂಗ್ರಹ ಚಿತ್ರ)
ಸ್ಕೂಬಾ ಡೈವಿಂಗ್‌ನಲ್ಲಿ ತೊಡಗಿರುವ ಪ್ರವಾಸಿ. (ಸಂಗ್ರಹ ಚಿತ್ರ)   

ಕಾರವಾರ: ಸಾಗರ­ದಡಿಯ ಅಪರೂಪದ ಜೀವರಾಶಿಯ ಕಣ್ತುಂಬಿಕೊಳ್ಳುವ ಸ್ಕೂಬಾ ಡೈವಿಂಗ್ ಚಟುವಟಿಕೆಗೆ ಇಲ್ಲಿನ ದೇವಗಡ ಲೈಟ್‌ಹೌಸ್‌ ಬಳಿ ಪ್ರಶಸ್ತ ಸ್ಥಳ ದೊರಕಿದ್ದು, ಇಲ್ಲಿ ಸ್ಕೂಬಾ ತರಬೇತಿ ನಡೆಸಲು ಕೂಡ ಜಿಲ್ಲಾಡಳಿತ ಮುಂದಾಗಿದೆ.

ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ, ಅವರಿಗೆ ಉದ್ಯೋಗವಕಾಶ ದೊರಕಿಸಿಕೊಡುವ ಹಾಗೂ ಮತ್ತಷ್ಟು ಪ್ರವಾಸಿಗರನ್ನು ಜಿಲ್ಲೆಯತ್ತ ಸೆಳೆದುಕೊಳ್ಳುವ ಯೋಜನೆಯನ್ನು ಜಿಲ್ಲಾಡಳಿತ ರೂಪಿಸಿದೆ. ತರಬೇತಿಗೆ ಗುರುತಿಸಲಾಗಿರುವ ಸ್ಥಳವು ಅಂಡಮಾನ್, ಇಂಡೋನೆಷಿಯಾದ ಬಾಲಿ ಕಡಲತೀರದಂತೆ ಸ್ಕೂಬಾ ತರಬೇತಿ ಪಡೆಯುವವರಿಗೆ ಹೇಳಿ ಮಾಡಿಸಿದಂತಿದೆ. ಆದರೆ ಹೆಚ್ಚಿನ ಜಲಚರಗಳು ಇಲ್ಲಿ ಲಭ್ಯವಿಲ್ಲದಿದ್ದರೂ ಆಕರ್ಷಕ ಸಮುದ್ರ ಸಸ್ಯಗಳು, ಸ್ವಚ್ಛ ನೀರು ಸ್ಕೂಬಾಗೆ ತಕ್ಕ ವಾತಾವರಣ ಕಲ್ಪಿಸಿಕೊಡಲಿದೆ’ ಎಂದು ತರಬೇತುದಾರ ರಂಜಿತ್ ಪುಂಜಾ.

ತರಬೇತಿ ಶಾಲೆ: ಸ್ಕೂಬಾ ತರಬೇತಿ ನೀಡಲು ಶಾಲೆಯೊಂದನ್ನು ತೆರೆಯುವ ಬಗ್ಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ರಾಷ್ಟ್ರೀಯ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ (ಜೇತ್ನಾ) ಮುಖ್ಯಸ್ಥರಿಗೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಈಗಾಗಲೇ ಪತ್ರ ಬರೆದು ತಿಳಿಸಿದ್ದಾರೆ. ಸದಾಶಿವಗಡ ಬಳಿಯ ಕಾಳಿನದಿ ತೀರದಲ್ಲಿ ಜೇತ್ನಾಗೆ ಸೇರಿದ ಕಟ್ಟಡ ಇದ್ದು, ಇಲ್ಲಿ ಕೇಂದ್ರ ಸ್ಥಾಪಿಸಿ ದೇವಗಡದಲ್ಲಿ ಸ್ಕೂಬಾ ಡೈವಿಂಗ್ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ.

ADVERTISEMENT

ಈಗಾಗಲೇ ತರಬೇತಿ ನೀಡಲು ಮಂಗಳೂರು ಮೂಲದ ಜ್ಯೋತಿ ಅಡ್ವರ್ಟೈಸರ್ಸ್‌ನ ಸರ್ಫೇಸ್ ಡೈವ್ ಸೆಂಟರ್‌ ಸಂಸ್ಥೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜನವರಿ 1ರಿಂದ ತರಬೇತಿ ನೀಡಲು ಅವರಿಗೆ ಸೂಚಿಸಲಾಗಿದೆ.

ತರಬೇತಿಗೆ ಅರ್ಜಿ ಆಹ್ವಾನ.
ಮೊದಲ ಹಂತದಲ್ಲಿ ಜಿಲ್ಲೆಯ 20 ಆಯ್ದ ಯುವಕ ಅಥವಾ ಯುವತಿಯರಿಗೆ ತೆರೆದ ನೀರಿನಲ್ಲಿ ಧುಮುಕುವ ತರಬೇತಿ (Open water driver course) ನೀಡಲು ತಗಲುವ ವೆಚ್ಚವನ್ನು ಭರಿಸಲು ಕರಾವಳಿ ಉತ್ಸವ ಸಮಿತಿ ತೀರ್ಮಾನಿಸಿದೆ.

ಈ ತರಬೇತಿಯ ಆಯೋಜನೆಯ ಜವಾಬ್ದಾರಿಯನ್ನು ಉತ್ತರ ಕನ್ನಡ ಜಿಲ್ಲಾ ಪ್ರವಾಸಿ ಸ್ಥಳಗಳ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿಗೆ ನೀಡಲಾಗಿದ್ದು, ಅದು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಡಿಪ್ಲೊಮಾ ಅಥವಾ ಪಿಯುಸಿ (ವಿಜ್ಞಾನ) ವಿದ್ಯಾರ್ಹತೆ ಹೊಂದಿರುವ, 200 ಮೀ. ನಿರಂತರ ಈಜು ಬರುವ 18 ರಿಂದ 35 ವರ್ಷ ವಯೋಮಿತಿ ಒಳಗಿನವರು ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅವರು ಕನಿಷ್ಠ 60 ಕೆ.ಜಿ ತೂಕ ಹಾಗೂ 165 ಸೆಂ.ಮೀ. ಎತ್ತರ ಇರಬೇಕು.

ಈಜು ಪರೀಕ್ಷೆ ಇಂದು
‘ಇದೇ 21 ರಂದು ಮುರ್ಡೇಶ್ವರದ ಆರ್‌ಎನ್‌ಎಸ್‌ ಗಾಲ್ಫ್‌ ರೆಸಾರ್ಟ್‌ನ ಈಜು ಕೊಳದಲ್ಲಿ ಈಜು ಪರೀಕ್ಷೆ ನಡೆಯಲಿದ್ದು, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಹಾಗೂ ಆಸಕ್ತರು ಮೂಲ ದಾಖಲಾತಿಗಳೊಂದಿಗೆ ಹಾಗೂ ಈಜು ಸಮವಸ್ತ್ರದೊಂದಿಗೆ ನೇರವಾಗಿ ಬೆಳಿಗ್ಗೆ 10ಕ್ಕೆ ಅಲ್ಲಿ ಹಾಜರಿದ್ದು, ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.