ADVERTISEMENT

ಕಾರವಾರದಲ್ಲಿ ಹೃದ್ರೋಗ ತುರ್ತು ನಿಗಾ ಘಟಕ ಶೀಘ್ರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 7:45 IST
Last Updated 18 ಅಕ್ಟೋಬರ್ 2011, 7:45 IST

ಕಾರವಾರ: ಕಾರವಾರ ಹಾರ್ಟ್ ಸೆಂಟರ್‌ವತಿಯಿಂದ ನಗರದಲ್ಲಿ ಹೃದ್ರೋಗ ಸಂಬಂಧಿಸಿದಂತೆ ತುರ್ತು ನಿಗಾ (ಐಸಿಯು) ಘಟಕವನ್ನು ಪ್ರಾರಂಭಿಸಲಾಗುವುದು ಎಂದು ಹಾರ್ಟ್ ಸೆಂಟರ್‌ನ ಡಾ. ಕೀರ್ತಿ ನಾಯ್ಕ ಹೇಳಿದರು.

ಕಾರವಾರ ಹಾರ್ಟ್ ಸೆಂಟರ್ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.  ಐಸಿಯು ಘಟಕವನ್ನು ಆದಷ್ಟು ಬೇಗ ಪ್ರಾರಂಭ ಮಾಡಬೇಕು ಎನ್ನುವ ಹಂಬಲವಿದೆ. ಕನಿಷ್ಟವೆಂದರೂ 3ರಿಂದ 4 ವರ್ಷಗಳು ಬೇಕಾಗಬಹುದು ಎಂದರು.

ವೈದ್ಯಕೀಯ ವ್ಯಾಸಂಗ ಮುಗಿದ ನಂತರ ಓಮೆಗಾ ಆಸ್ಪತ್ರೆ ಮತ್ತು ಗೋವಾ ವೊಕಾರ್ಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ತವರು ನೆಲದಲ್ಲಿ ಸೇವೆ ಸಲ್ಲಿಸಬೇಕು ಎನ್ನುವ ಕನಸುಹೊತ್ತು ಬಂದಿದ್ದೇನೆ ಎಂದು ಡಾ. ಕೀರ್ತಿ ತಿಳಿಸಿದರು.

ಹಾರ್ಟ್ ಸೆಂಟರ್ ಎರಡನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ `ಹೃದಯ ಸುರಕ್ಷಾ ಯೋಜನೆ~ ಜಾರಿಗೆ ತಂದಿದ್ದು, 70 ವರ್ಷ ಮೇಲ್ಪಟ್ಟವರಿಗೆ ಶೇ 25ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಅವರು ನುಡಿದರು.

ಹೃದ್ರೋಗ ತೊಂದರೆ ಎದುರಾದಲ್ಲಿ ಇಸಿಜಿ, ಎಕೊಕಾರ್ಡಿಯೋಗ್ರಾಫ್ ಮತ್ತು ಟಿಎಮ್‌ಟಿ (ತ್ರೆಡ್‌ಮಿಲ್ ಟೆಸ್ಟ್) ಮಾಡಿಕೊಳ್ಳುವುದು ಉತ್ತಮ. ಕಾರವಾರ ಹಾರ್ಟ್ ಸೆಂಟರ್‌ನಲ್ಲಿ ಈ ಸೌಲಭ್ಯವಿದೆ ಎಂದರು.

ಇಸಿಜಿ, ಎಕೊಕಾರ್ಡಿಯೋಗ್ರಾಫ್ ಮತ್ತು ಟಿಎಮ್‌ಟಿ (ತ್ರೆಡ್‌ಮಿಲ್ ಟೆಸ್ಟ್) ತಪಾಸಣೆಗೆ ರೂ. 1500 ಖರ್ಚು ಬರುತ್ತದೆ. ಹಾರ್ಟ್ ಸೆಂಟರ್ ಎರಡನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಒಂದು ಸಾವಿರ ರೂಪಾಯಿಯಲ್ಲಿ ಈ ಮೂರು ತಪಾಸಣೆ ಮಾಡಲಾಗುವುದು ಎಂದು ಡಾ. ಕೀರ್ತಿ ನಾಯ್ಕ ಮಾಹಿತಿ ನೀಡಿದರು.

ದೇಹದಲ್ಲಿ ಯಾವುದೇ ರೀತಿಯ ನೋವಿನ ಅನುಭವ ಆದಾಗ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ನೋವು ನಿರ್ಲಕ್ಷ್ಯ ಮಾಡಿದ್ದಲ್ಲಿ ತಕ್ಕ ಬೆಲೆ ತೆರಬೇಕಾದ ಪ್ರಸಂಗವೂ ಬರಬಹುದು ಎಂದ ಅವರು, 45 ವರ್ಷ ಮೀರಿದ ಪ್ರತಿಯೊಬ್ಬರೂ ಇಸಿಜಿ ತಪಾಸಣೆ ಮಾಡಿಕೊಳ್ಳುವುದು ಉತ್ತಮ ಎಂದು ಅವರು ಸಲಹೆ ನೀಡಿದರು.

ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ಹೃದ್ರೋಗಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಗಾಗಿ ಡಾ. ಕೀರ್ತಿ ನಾಯ್ಕ (9886676879) ಅವರನ್ನು ಸಂಪರ್ಕ ಮಾಡಬಹುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.