ADVERTISEMENT

ಕಾರವಾರ ನಗರಸಭೆ ಕಾಂಗ್ರೆಸ್‌ ಮಡಿಲಿಗೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:29 IST
Last Updated 17 ಸೆಪ್ಟೆಂಬರ್ 2013, 6:29 IST

ಕಾರವಾರ-: ಇಲ್ಲಿಯ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದು, ಅಧ್ಯಕ್ಷರಾಗಿ ಲೀಲಾಬಾಯಿ ಠಾಣೇಕರ ಹಾಗೂ ಉಪಾಧ್ಯಕ್ಷರಾಗಿ ಛಾಯಾ ಜಾವಕರ ಆಯ್ಕೆಯಾದರು.

ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 21ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ಲೀಲಾಬಾಯಿ ಆಯ್ಕೆಯಾದರು. ನಗರಸಭೆ ಮಹಿಳಾ ಸದಸ್ಯರ ಪೈಕಿ ಅವರು ಏಕೈಕ ಪರಿಶಿಷ್ಟ ಜಾತಿ ಮಹಿಳೆಯಾಗಿದ್ದರಿಂದ ಯಾವುದೇ ಸ್ಪರ್ಧೆಯಿಲ್ಲದೇ ಚುನಾಯಿತರಾದರು.

ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 2ನೇ ವಾರ್ಡ್‌ನ ಸದಸ್ಯೆ ಕಾಂಗ್ರೆಸ್‌ನ ಛಾಯಾ ಜಾವಕರ 17 ಮತಗಳನ್ನು ಪಡೆದು ಆಯ್ಕೆಯಾದರು. ಇವರಿಗೆ ಪ್ರತಿಸ್ಪರ್ಧಿಯಾಗಿದ್ದ 20ನೇ ವಾರ್ಡ್‌ನ ಸದಸ್ಯೆ ಬಿಜೆಪಿಯ ಲಕ್ಷ್ಮಿ ಕೋಳಂಕರ 16 ಮತಗಳನ್ನು ಪಡೆದರು.

ನಗರಸಭೆಯ ಒಟ್ಟು 31 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ 13 ಸ್ಥಾನಗಳನ್ನು ಗಳಿಸಿದೆ. ಉಳಿದ 5 ಸ್ಥಾನಗಳಿಗೆ ಪಕ್ಷೇತರರು ಆಯ್ಕೆಯಾಗಿದ್ದರು.

ಕಾಂಗ್ರೆಸ್ 13 ಸದಸ್ಯ ಬಲದೊಂದಿಗೆ, ಪಕ್ಷೇತರ ಶಾಸಕ ಸತೀಶ ಸೈಲ್‌ ಹಾಗೂ ಪಕ್ಷೇತರರಲ್ಲಿ ಶೈಲಾ ನಾಯ್ಕ, ಪ್ರೇಮಾನಂದ ಗುನಗಾ ಮತ್ತು ಪಾಂಡುರಂಗ ರೇವಂಡಿಕರ್‌ ಬೆಂಬಲದೊಂದಿಗೆ ಒಟ್ಟು 17 ಸದಸ್ಯ ಬಲವನ್ನು ಹೊಂದಿ ಉಪಾಧ್ಯಕ್ಷ ಗಾದಿಯನ್ನು ತನ್ನಾಗಿಸಿಕೊಂಡಿತು. 

ಸಂಸದ ಅನಂತಕುಮಾರ ಹೆಗಡೆ ಚುನಾವಣೆಯಲ್ಲಿ ಭಾಗವಹಿಸಿ ಬಿಜೆಪಿ ಪರ ಮತ ಚಲಾಯಿಸಿದರು. ಚುನಾವಣಾ ಅಧಿಕಾರಿಯಾಗಿ ಕಾರವಾರದ ಉಪವಿಭಾಗಾಧಿಕಾರಿ ಪುಷ್ಪಲತಾ ಕಾರ್ಯನಿರ್ವಹಿಸಿದರು.

ಚುನಾವಣೆಯಲ್ಲಿ ಭಾಗವಹಿಸಿದ್ದ ಶಾಸಕ ಸತೀಶ ಸೈಲ್‌ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು. ಕಾಂಗ್ರೆಸ್‌ ಕಾರ್ಯಕರ್ತರು ಪಟಾಸಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.