ADVERTISEMENT

ಕಾರ್ಯಕ್ರಮ ಯಶಸ್ಸಿಗೆ ಕಲಾಸಕ್ತರು ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 10:05 IST
Last Updated 15 ಜನವರಿ 2012, 10:05 IST

ಸಿದ್ದಾಪುರ: `ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ಸು ಪಡೆಯಲು ಕಲಾವಿದರು, ಸಂಘಟಕರು ಮತ್ತು ಕಲಾಸಕ್ತರು ಅಗತ್ಯ~ ಎಂದು ಅಂತರರಾಷ್ಟ್ರೀಯ ಖ್ಯಾತಿಯ ವಯೋಲಿನ್ ವಾದಕಿ, ಡಾ. ಎನ್.ರಾಜಂ ಹೇಳಿದರು.

ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಶನಿವಾರ ಆಯೋಜಿಸಲಾಗಿದ್ದ `ಪರಂಪರಾ~ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಸ್ಥಳೀಯ ಸಾಂಸ್ಕೃತಿಕ ಸಂಘಟನೆಯಾದ `ಮುರಳೀವನ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಸಾರ್ವಜನಿಕರು ತನು, ಮನ, ಧನದ ಸಹಕಾರ ನೀಡಿದಾಗ ಒಂದು ಸಂಸ್ಥೆ ಪ್ರಗತಿ ಹೊಂದುತ್ತದೆ. ಮುರಳೀವನ ಸಂಸ್ಥೆಯೂ ಉತ್ತಮ ಪ್ರಗತಿಹೊಂದಲಿ, ಯಶಸ್ಸು ಪಡೆಯಲಿ~ ಎಂದು ಅವರು ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಸ್ತ್ರೀರೋಗ ತಜ್ಞ ಡಾ.ಶ್ರೀಧರ ವೈದ್ಯ ಮಾತನಾಡಿ, ಸಂಗೀತದಿಂದ ಮನಸ್ಸಿಗೆ ಯೋಗ ಮಾಡಿದ ಅನುಭವವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಮಾತನಾಡಿ, ಸಂಗೀತ ಪ್ರಕೃತಿಯ ಅವಿಭಾಜ್ಯ ಅಂಗವಾಗಿದೆ. ಮನುಷ್ಯರಲ್ಲದೇ ಪಶು-ಪಕ್ಷಿಗಳು ಮತ್ತು ಗಿಡ-ಮರಗಳು ಕೂಡ ಸಂಗೀತವನ್ನು ಆಸ್ವಾದಿಸುತ್ತವೆ ಎಂದರು.

ಡಾ.ಸಂಗೀತಾ ಶಂಕರ್,ರಾಗಿಣಿ ಶಂಕರ್,ನಂದಿನಿ ಶಂಕರ್, ಪಂಡಿತ ರವೀಂದ್ರ ಯಾವಗಲ್, ಕಿರಣ ಹೆಗಡೆ ಮಘೇಗಾರ, ಗುರುಮೂರ್ತಿ ವೈದ್ಯ ಉಪಸ್ಥಿತದ್ದರು. ಸಿ.ವಿ.ಹೆಗಡೆ ಮಘೇಗಾರ ಸ್ವಾಗತಿಸಿದರು. ನಂದನ ಹೆಗಡೆ ಮಘೇಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಿಂಧು ಹೆಗಡೆ ನಿರೂಪಿಸಿದರು. ಟಿ.ಜಿ.ಹೆಗಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.