ADVERTISEMENT

ಕಾಳಿ ಸೇತುವೆಗೆ ಅಪಾಯವಿಲ್ಲ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 9:50 IST
Last Updated 1 ಅಕ್ಟೋಬರ್ 2011, 9:50 IST

ಕಾರವಾರ: ಕರ್ನಾಟಕ ಹಾಗೂ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಇಲ್ಲಿಗೆ ಸಮೀಪದ ಕೋಡಿಭಾಗ ಸಮೀಪ ನಿರ್ಮಿಸಿರುವ ಕಾಳಿ ಸೇತುವೆಗೆ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಜಪಾನ್ ಇಂಟರ್‌ನ್ಯಾಶನಲ್ ಕನ್ಸಲ್ಟೆನ್ಸಿ ಅಸೋಸಿಯೇಟ್ಸ್‌ನ (ಜೈಕಾ) ತಜ್ಞರು ಪ್ರಮಾಣಪತ್ರ ನೀಡಿದ್ದಾರೆ.

ಕಾಳಿ ಸೇತುವೆಯನ್ನು ವಿಶೇಷ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದ್ದು ಎಂಟು ಹಿಂಜ್‌ಬೇರಿಂಗ್‌ಗಳನ್ನು ಅಳವಡಿಸಲಾಗಿದೆ. ಈ ಬೇರಿಂಗ್‌ಗಳನ್ನು ತೆಗೆದು ಹೊಸ ಬೇರಿಂಗ್‌ಗಳನ್ನು ಅಳವಡಿಸಲು 2009ರಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಮುಂಬೈನ ರಿಬಿಲ್ಟ್ ಕಂಪೆನಿ ಕಾಮಗಾರಿ ಗುತ್ತಿಗೆ ಪಡೆದುಕೊಂಡಿತ್ತು.

ಸೇತುವೆಗೆ ಅಳವಡಿಸಿದ ಹಿಂಜ್ ಬೇರಿಂಗ್‌ಗಳನ್ನು ಬೇರ್ಪಡಿಸಲು ಸಾಧ್ಯವಾಗದಿರುವುರಿಂದ ಬೇರಿಂಗ್ ಸವೆದು ಹೋದ ಭಾಗದಲ್ಲಿ ಸಿಂಪ್ಲೇಟ್ (ತೆಳುವಾದ ಕಬ್ಬಿಣದ ಪಟ್ಟಿ)ಗಳನ್ನು ಅಳವಡಿಸಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿತ್ತು.

ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರವಾರ ಉಪ ವಿಭಾಗದ ಮುಖ್ಯ ಎಂಜಿನಿಯರ್ ಅವರು ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಪತ್ರ ಬರೆದು ಸೇತುವೆಯ ಸುರಕ್ಷತೆಯನ್ನು ಪರೀಕ್ಷೆ ಮಾಡಲು ಏಜೆನ್ಸಿ ನೇಮಕ ಮಾಡಬೇಕು ಎಂದು ತಿಳಿಸಿದ್ದರು.

ಕೇಂದ್ರ ಸಾರಿಗೆ ಇಲಾಖೆ ಜಪಾನ್ ಇಂಟರ್ ನ್ಯಾಶನಲ್ ಕನ್ಸಲ್ಟಂಟ್ ಅಸೋಸಿಯೇಟ್ಸ್ ಅನ್ನು ಈ ಕಾರ್ಯಕ್ಕೆ ನೇಮಿಸಿತು.

ಜೈಕಾದ ಸಲಹೆಗಾರ ಮಶಿರೋ ಶಿರಾಟೋ ಮತ್ತು ಎಂಜಿನಿಯರ್ ಹಿಡಕಿ ನೊಟಾಯಾ ಮತ್ತು ರಾ.ಹೆ. ಮುಖ್ಯ ಎಂಜಿನಿಯರ್ ಕೃಷ್ಣ ರೆಡ್ಡಿ, ಸಿ.ಆರ್. ಗಂಗಾಧರ ಅವರು ಜುಲೈ ತಿಂಗಳಲ್ಲಿ ಕಾಳಿ ಸೇತುವೆಯನ್ನು ಪರೀಕ್ಷಿಸಿದ್ದರು.

ಸೇತುವೆಯ ಎಲ್ಲ ಭಾಗಗಳನ್ನು ಪರೀಕ್ಷಿಸಿದ ಜೈಕಾದ ಎಂಜಿನಿಯರ್ ವರದಿ ನೀಡಿದ್ದು, ಹಿಂಜ್ ಬೇರಿಂಗ್ ಅಳವಡಿಸದೇ ಇರುವುದರಿಂದ ಸೇತುವೆಗೆ ಯಾವುದೇ ರೀತಿಯ ಧಕ್ಕೆಯಿಲ್ಲ. ಸೇತುವೆ ಉತ್ತಮ ಸ್ಥಿತಿಯಲ್ಲಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಸೇತುವೆ ನಿರ್ವಹಣೆಯ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ರಾ.ಹೆ. ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಕರ್ನಾಟಕ ಹಾಗೂ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ -17ರಲ್ಲಿ ಕಾಳಿ ನದಿಗೆ 1974ರಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಚಾಲನೆ ನೀಡಲಾಯಿತು. ನಾಲ್ಕು ಕೋಟಿ ರೂಪಾಯಿ ವೆಚ್ಚದ, 6.63 ಮೀಟರ್ ಉದ್ದದ ಸೇತುವೆ ಕಾಮಗಾರಿ ಗುತ್ತಿಗೆ ಪಡೆದ ಗ್ಯಾಮನ್ ಇಂಡಿಯಾ ಕಂಪೆನಿ 1984ರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿತ್ತು.

ಪಿಲ್ಲರ್‌ಗಳನ್ನು ನಿರ್ಮಿಸಿ ಅದರ ಮೇಲೆ ಸ್ಲ್ಯಾಬ್ ಹಾಕಿ ಸೇತುವೆ ನಿರ್ಮಿಸುವುದು ಸಾಮಾನ್ಯ ತಂತ್ರಜ್ಞಾನ. ಆದರೆ ಕಾಳಿ ಸೇತುವೆಗೆ ವಿಶೇಷ ತಂತ್ರಜ್ಞಾನ ಬಳಸಲಾಗಿದೆ. ಐದು ಪಿಲ್ಲರ್‌ಗಳನ್ನು ನಿರ್ಮಿಸಿ ಅದರ ಮೇಲೆ ಕ್ಯಾಂಟಿಲಿವರ್‌ಗಳನ್ನು ಇಡಲಾಗಿದೆ. ಎರಡು ಕ್ಯಾಂಟಿಲಿವರ್‌ಗಳನ್ನು ಜೋಡಿಸಲು ಹಿಂಜ್ ಬೇರಿಂಗ್‌ಗಳನ್ನು ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.