ADVERTISEMENT

ಕುಡಿಯುವ ನೀರಿಗೆ ₹ 1.11 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 8:31 IST
Last Updated 28 ಫೆಬ್ರುವರಿ 2018, 8:31 IST

ಸಿದ್ದಾಪುರ: ‘ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಕ್ಕಾಗಿ ₹ 1.11 ಕೋಟಿ ವಿಶೇಷ ಅನುದಾನ ಮಂಜೂರಾಗಿದೆ’ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕುಡಿಯುವ ನೀರಿನ ಬಗ್ಗೆ ಮಂಗಳವಾರ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಇದು ನಂಜುಂಡಪ್ಪ ವರದಿಯಲ್ಲಿ ಸಿದ್ದಾಪುರ ಹಿಂದುಳಿದ ತಾಲ್ಲೂಕಾಗಿರುವುದರಿಂದ ಈ ಅನುದಾನ ನೀಡಲಾಗಿದೆ’ ಎಂದರು.

‘ಕಳೆದ ಮೇ ತಿಂಗಳಿನಲ್ಲಿ ₹ 1.40 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೆ. ಅದು ಈಗ ಮಂಜೂರಾಗಿದೆ. ಅನುದಾನ ತಡವಾಗಿ ಮಂಜೂರು ಆಗಿರುವುದರಿಂದ ಕ್ರಿಯಾ ಯೋಜನೆಯನ್ನು ತಕ್ಷಣ ಸಲ್ಲಿಸಬೇಕು’ ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ADVERTISEMENT

‘ಕಳೆದ ವರ್ಷ ಕುಡಿಯುವ ನೀರಿನ ಸಲುವಾಗಿ ಪ್ರತಿಯೊಂದು ಗ್ರಾಮ ಪಂಚಾಯ್ತಿಯಲ್ಲಿ ಇಡಲಾಗಿದ್ದ ₹ 1.50 ಲಕ್ಷ ಅನುದಾನ ಉಳಿದಿದೆಯೇ?’ ಎಂಬ ಕಾಂಗೇರಿ ಪ್ರಶ್ನೆಗೆ, ‘ಈ ವರ್ಷ ₹ 3 ಲಕ್ಷ ಅನುದಾನ ಇಡಲಾಗಿದೆ’ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಉತ್ತರಿಸಿದರು.

‘ತಾಲ್ಲೂಕಿನ ಯಾವುದೇ ಭಾಗದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕಾದಲ್ಲಿ ಅದಕ್ಕೆ ಈಗಲೇ ಅನುಮತಿ ಪಡೆಯಬೇಕು’ ಎಂದು ತಹಶೀಲ್ದಾರ್‌ಗೆ ಸೂಚಿಸಿದರು.

‘ಕಳೆದ ವರ್ಷ ತಾಲ್ಲೂಕಿನ ಹಾರ್ಸಿಕಟ್ಟಾದಲ್ಲಿ ಕುಡಿಯುವ ನೀರು ಶುದ್ಧವಿಲ್ಲದೇ ಸಮಸ್ಯೆ ಉಂಟಾಗಿತ್ತು. ಆ ಭಾಗದಲ್ಲಿ ಇಲಿ ಜ್ವರದ ಪ್ರಕರಣಗಳು ವರದಿಯಾಗಿದ್ದವು. ಆದ್ದರಿಂದ ಕುಡಿಯುವ ನೀರಿನ ಸ್ವಚ್ಛತೆಯ ಹಾಗೂ ಬಾವಿಗಳ ನೀರಿನ ಸ್ವಚ್ಛತೆಯ ಬಗ್ಗೆ ಗಮನ ನೀಡಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸುಧೀರ್ ಗೌಡರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಂ.ಜಿ. ಹೆಗಡೆ ಗೆಜ್ಜೆ ಹಾಗೂ ನಾಗರಾಜ ನಾಯ್ಕ, ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ತಹಶೀಲ್ದಾರ್ ಪಟ್ಟರಾಜ ಗೌಡ ಹಾಗೂ ತಾಲ್ಲೂಕು ಪಂಚಾಯ್ತಿ ಇಒ ಶ್ರೀಧರ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.