ಸಿದ್ದಾಪುರ: ‘ಕುಡಿಯುವ ನೀರಿನ ಅಗತ್ಯವಿರುವ ತಾಲ್ಲೂಕಿನ ಯಾವುದೇ ಪ್ರದೇಶವೂ ಈ ಕುರಿತು ನಡೆಸಲಾಗುತ್ತಿರುವ ಸಮೀಕ್ಷೆಯಲ್ಲಿ ತಪ್ಪಿಹೋಗದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು’ ಎಂದು ಉತ್ತರ ಕನ್ನಡ ಜಿ.ಪಂ. ಉಪಾಧ್ಯಕ್ಷ ಉದಯ ನಾಯ್ಕ ಸೂಚನೆ ನೀಡಿದರು.ಶುಕ್ರವಾರ ಸಂಜೆ ಪಟ್ಟಣದ ತಾ.ಪಂ. ಸಭಾಭವನದಲ್ಲಿ ನಡೆದ ತಾಲ್ಲೂಕಿನ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆಯ ಸಂದರ್ಭದಲ್ಲಿ ಅವರು ಮಾತನಾಡಿದರು.
ಈಗ ನಡೆಸಲಾಗುತ್ತಿರುವ ಸಮೀಕ್ಷೆಯ ಆಧಾರದ ಮೇಲೆಯೇ ಇನ್ನು ಮುಂದೆ ಕುಡಿಯುವ ನೀರಿನ ವಿವಿಧ ಯೋಜನೆಗಳು ಬರಲಿವೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆಯಿರುವ ಪ್ರದೇಶವನ್ನು ಈಗಿನ ಸಮೀಕ್ಷೆಯಲ್ಲಿ ಬಿಟ್ಟರೆ, ಮುಂದೆ ಅಲ್ಲಿಗೆ ಯಾವುದೇ ಯೋಜನೆಯನ್ನು ಕೊಡುವದು ಅಸಾಧ್ಯವಾಗುತ್ತದೆ ಎಂದರು.
ತಾಲ್ಲೂಕಿನ ಬೇಡ್ಕಣಿ ಊರಿನಲ್ಲಿ ಕುಡಿಯುವ ನೀರಿನ ಬಾವಿಗಳು ಬತ್ತಿವೆ. ಜನರು ಊರಿನಿಂದ ದೂರವಿರುವ ಹೊಳೆಯಿಂದ ನೀರು ತರುವ ಪರಿಸ್ಥಿತಿ ಉಂಟಾಗಿದೆ ಎಂದು ತಾ.ಪಂ. ಸದಸ್ಯ ಬಶೀರ ಸಾಬ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರ ನೀಡಿದ ಜಿ.ಪಂ.ಉಪಾಧ್ಯಕ್ಷರು, ‘ಅಲ್ಲಿನ ಸಮಸ್ಯೆ ಪರಿಹರಿಸಲು ಜಲನಿರ್ಮಲ ಅಥವಾ ರಾಜೀವಗಾಂಧಿ ಕುಡಿಯುವ ನೀರಿನ ಯೋಜನೆಯ ಬಗ್ಗೆ ಯೋಚಿಸೋಣ’ ಎಂದು ಭರವಸೆ ನೀಡಿದರು.
ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಮಾತನಾಡಿದ ತಾ.ಪಂ.ಸದಸ್ಯ ನೀಲಕಂಠ ಗೌಡರ್, ‘ತಾಲ್ಲೂಕಿನಲ್ಲಿ ಕಲ್ಲು ಕ್ವಾರಿಗಳು ಸ್ಥಗಿತಗೊಂಡಿರುವುದರಿಂದ ಹಲವೆಡೆ ಶಾಲಾ ಕಟ್ಟಡ ಇತ್ಯಾದಿ ಕಾಮಗಾರಿಗಳಿಗೆ ಸಮಸ್ಯೆ ಉಂಟಾಗಿದೆ’ ಎಂದು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಉಪಾಧ್ಯಕ್ಷರು, ‘ಅಭಿವೃದ್ಧಿ ಕೆಲಸಗಳಿಗೆ ಜಲ್ಲಿ ಮತ್ತು ಕೆಂಪು ಕಲ್ಲು ಅಗತ್ಯ, ಅದಿಲ್ಲವಾದರೆ ಅಭಿವೃದ್ಧಿ ನಿಲ್ಲುತ್ತದೆ. ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಏನಾಗುತ್ತದೆ ನೋಡೋಣ’ ಎಂದರು.
ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಸದಸ್ಯ ಈಶ್ವರ ನಾಯ್ಕ, ‘ಪಟ್ಟಣದಿಂದ ಜೋಗಕ್ಕೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲ. ಆ ಬಗ್ಗೆ ಜಿ.ಪಂ. ಸಭೆಯಲ್ಲಿಯೂ ಪ್ರಶ್ನೆ ಮಾಡಿದ್ದೆ. ಆದರೆ ಸಮಸ್ಯೆ ಪರಿಹಾರವಾಗಿಲ್ಲ. ಇದು ಮುಂದುವರಿದರೇ ನಾವು ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದರು.
ಇದಕ್ಕೆ ಉತ್ತರಿಸಿದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ‘ಈ ರೂಟ್‌ನ ಸಾರಿಗೆ ಬಸ್‌ಗೆ ಪ್ರಯಾಣಿಕರಿಲ್ಲದೆ, ಆದಾಯ ಕಡಿಮೆಯಾಗಿದೆ’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
‘ಜೋಗಕ್ಕೆ ಬಸ್ ವ್ಯವಸ್ಥೆ ಅಗತ್ಯ. ಆದ್ದರಿಂದ ಕೆಲವು ದಿನಗಳ ಕಾಲ ಸಾರಿಗೆ ಬಸ್ ಸಂಚಾರವನ್ನು ಸಮಯದ ಬದಲಾವಣೆ ಮಾಡಿ ಪ್ರಾರಂಭಿಸಿ ನೋಡಬಹುದು’ ಎಂದು ಜಿ.ಪಂ. ಉಪಾಧ್ಯಕ್ಷರು ಸಲಹೆ ನೀಡಿದರು. ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಸುಮಾ ಲಮಾಣಿ, ಜಿ.ಪಂ. ಸದಸ್ಯರುಗಳಾದ ಕಮಲಾ ನಾಯ್ಕ,ಶಾಲಿನಿ ಗೌಡರ್, ಈಶ್ವರ ನಾಯ್ಕ, ತಾ.ಪಂ. ಅಧ್ಯಕ್ಷೆ ಶಾಂತಿ ಹಸ್ಲರ್, ಉಪಾಧ್ಯಕ್ಷ ಪ್ರಸನ್ನ ಹೆಗಡೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.