ADVERTISEMENT

`ಕೃಷಿ ಮರೆತರೆ ಊಟಕ್ಕೂ ಪರದಾಟ'

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 9:46 IST
Last Updated 22 ಡಿಸೆಂಬರ್ 2012, 9:46 IST

ಮುಂಡಗೋಡ: `ಪ್ರಾಮಾಣಿಕವಾಗಿ ಕಾಯಕ ಮಾಡಿ ಬದುಕಬೇಕೆನ್ನುವ ಆಸೆ ಈಗಿನ ಯುವಕರಲ್ಲಿ ಕಡಿಮೆಯಾಗುತ್ತಿದೆ. ಕೃಷಿಯತ್ತ ಹೆಚ್ಚಿನ ಆಸಕ್ತಿ ತೋರದೇ ಇದ್ದರೆ ಮುಂದಿನ 25ವರ್ಷಗಳಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ಬರಬಹುದು' ಎಂದು ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿನುಡಿದರು.

ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಕೃಷಿ ಇಲಾಖೆ, ಕೃಷಿಕ ಸಮಾಜ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಆಶ್ರಯದಲ್ಲಿ ಇಲ್ಲಿನ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶುಕ್ರವಾರ ನಡೆದ ಕೃಷಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ರೈತರ ಬದುಕು ದುಸ್ತರವಾಗಿದ್ದು ರೈತರ ಉದ್ಧಾರವಾಗದ ಹೊರತು ದೇಶದ ಪ್ರಗತಿ ಅಸಾಧ್ಯ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿ  ಸ್ವಾವಲಂಬನೆ ಜೀವನ ನಡೆಸುವಂತೆ ಮಾರ್ಗದರ್ಶನ ನೀಡಬೇಕಾಗಿದೆ.

ಕೆಲ ರೈತ ಸಂಘಟನೆಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಕೆಲ ರಾಜಕಾರಣಿಗಳ ಬೆನ್ನುಹತ್ತಿ ರೈತರನ್ನು ವಂಚಿಸುತ್ತಿವೆ' ಎಂದ ಅವರು, ಹೆಣ್ಣುಮಕ್ಕಳು ಶೌಚಾಲಯ ಇಲ್ಲದ ಮನೆಗೆ ಮದುವೆಯಾಗಿ ಹೋಗುವುದಿಲ್ಲ ಎಂದು ಹೇಳಿ ಗಂಡನ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಬೇಕು ಎಂದರು.

ಶಾಸಕ ವಿ.ಎಸ್.ಪಾಟೀಲ ಮಾತನಾಡಿ, ಕೃಷಿಗೆ ಹೆಚ್ಚಿನ ಒತ್ತು ನೀಡಬೇಕಾದ ಅವಶ್ಯಕತೆಯಿದೆ ಎಂದರು. ಕಾಂಗ್ರೆಸ್ ಮುಖಂಡ ಶಿವರಾಮ ಹೆಬ್ಬಾರ, ಜಿಲ್ಲಾ ಪಂಚಾತಿ ಸದಸ್ಯ ಅಶೋಕ ಸಿರ್ಸಿಕರ, ಯೋಜನಾಧಿಕಾರಿ ಅಮರಪ್ರಸಾದ ಶೆಟ್ಟಿ ಮಾತನಾಡಿದರು.
ಪ್ರಮೋದ ಹೆಗಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಕೆ.ಗಡವಾಲೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೊಂಡುಬಾಯಿ ಜೋರೆ, ಕೃಷಿಕ ಸಮಾಜದ ಅಧ್ಯಕ್ಷ ಸಂಗಮೇಶ ಬಿದರಿ, ತಹಶೀಲ್ದಾರ ಎಂ.ವಿ.ಕಲ್ಲೂರಮಠ, ಎಸಿಎಫ್ ವಿ.ಆರ್.ಬಸನಗೌಡರ, ಎಸ್.ಕೆ.ಕೆಂಪರಾಜ, ಡಾ.ಎಚ್.ಬಿ.ಬಬಲಾದ ಉಪಸ್ಥಿತರಿದ್ದರು. ರವಿ ಆಲದಕಟ್ಟಿ ಪ್ರಾರ್ಥನೆ ಹಾಡಿದರು. ರವಿರಾಜ ಸ್ವಾಗತಿಸಿದರು. ಮುನಿಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT