ADVERTISEMENT

ಗೋವಿನಜೋಳ ತಿಂದು ಆಕಳು ಸಾವು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 11:13 IST
Last Updated 20 ಏಪ್ರಿಲ್ 2013, 11:13 IST

ಮುಂಡಗೋಡ: ಹೊಲದಲ್ಲಿ ಮೇಯಲು ಹೋಗಿದ್ದ ಎರಡು ಆಕಳು ಹಾಗೂ ಎರಡು ಎತ್ತುಗಳು ನಿಗೂಢವಾಗಿ ಮೃತಪಟ್ಟ ಘಟನೆ ತಾಲ್ಲೂಕಿನ ಅಜ್ಜಳ್ಳಿ ಪ್ಲಾಟ್ ಸಮೀಪ ಶುಕ್ರವಾರ ಸಂಜೆ ಜರುಗಿದೆ.

ಅಜ್ಜಳ್ಳಿ ಪ್ಲಾಟ್‌ನಲ್ಲಿರುವ ಕುರಿ ಸಾಕಾಣಿಕಾ ಕೇಂದ್ರದ ಸಮೀಪದಲ್ಲಿ ಗೋವಿನಜೋಳ ಬೆಳೆಸಲಾಗಿದ್ದು, ಅಲ್ಲಿ ಮೇಯುತ್ತಿದ್ದ ಸಂದರ್ಭದಲ್ಲಿ ಜಾನುವಾರುಗಳು ಹೊಟ್ಟೆ ಉಬ್ಬಿ ಮೃತಪಟ್ಟಿವೆ ಎನ್ನಲಾಗಿದೆ. ಕುರಿ ಸಾಕಾಣಿಕಾ ಕೇಂದ್ರ ಇರುವ ಹೊಲವು ಚಿಕ್ಕಮಗಳೂರಿನ ವ್ಯಕ್ತಿಯೊಬ್ಬರಿಗೆ ಸೇರಿದೆ. ಹೊಲದ ಮಾಲೀಕರು ಆಗ ಇರಲಿಲ್ಲ.

ಜಾನುವಾರುಗಳನ್ನು ಕಳೆದುಕೊಂಡ ರೈತರು ದುಃಖಿಸುತ್ತಿದ್ದರು. ಜಾನುವಾರುಗಳು ಹೊಟ್ಟೆಉಬ್ಬಿ ಸತ್ತ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಜಮಾವಣೆಗೊಂಡು ಹೊಲದ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 15 ದಿನಗಳ ಹಿಂದೆ ಇದೇ ರೀತಿಯಾಗಿ ಎರಡು ಎತ್ತುಗಳು ಸತ್ತಿದ್ದವು ಎಂದು ಪೊಲೀಸರಿಗೆ ಗ್ರಾಮಸ್ಥರು ದೂರು ನೀಡಿದರು.

ಕಳೆದ ಕೆಲ ದಿನಗಳಿಂದ ನಿರ್ದಿಷ್ಟ ಜಾಗದಲ್ಲಿಯೇ ಇಂಥ ಘಟನೆಗಳು ಸಂಭವಿಸುತ್ತಿವೆ. ಈ ಬಗ್ಗೆ ತನಿಖೆ ಕೈಗೊಳ್ಳುವಂತೆಯೂ ಆಗ್ರಹಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಮತಗಟ್ಟೆಗೆ ಭೇಟಿ
ಮುಂಡಗೋಡ: ಯಲ್ಲಾಪುರ ಕ್ಷೇತ್ರದ ಚುನಾವಣಾ ವೀಕ್ಷಕ ಡಾ.ಎಂ.ಕೆ.ಎಸ್.ಸುಂದರಂ ಮತಗಟ್ಟೆಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಉತ್ತರ ಪ್ರದೇಶದ ಗಾಜಿಯಾಬಾದ ಜಿಲ್ಲಾಧಿಕಾರಿಯಾಗಿರುವ ಡಾ.ಸುಂದರಂ ಪಟ್ಟಣ ಪಂಚಾಯ್ತಿ ಹಿಂಬದಿಯ ಮತಗಟ್ಟೆ ಸೇರಿದಂತೆ ಕೆಲ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಬಸವರಾಜ ಮೆಳವಣಿಕಿ, ಪಂಚಾಯತರಾಜ ಎಂಜಿನಿಯರ್ ಆರ್.ಎಚ್. ಕುಲಕರ್ಣಿ, ಸಿಪಿಐ ಬಿ.ಗಿರೀಶ ಉಪಸ್ಥಿತರಿದ್ದರು.

ವಾಹನ ತಪಾಸಣೆ
ಮುಂಡಗೋಡ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಕ್ರಮವಾಗಿ ಮದ್ಯ ಹಾಗೂ ಹಣವನ್ನು ಸಾಗಿಸುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ತಾಲ್ಲೂಕಿನ ವಿವಿಧೆಡೆ ಪೊಲೀಸ್ ನಾಕಾಬಂದಿಗಳನ್ನು ನಿರ್ಮಿಸಲಾಗಿದ್ದು ವಾಹನಗಳ ತಪಾಸಣಾ ಕಾರ್ಯ ನಡೆಸಲಾಗುತ್ತಿದೆ.

ಯಲ್ಲಾಪುರ, ಬಂಕಾಪುರ ರಸ್ತೆ ಸೇರಿದಂತೆ ಹುಬ್ಬಳ್ಳಿ ರಸ್ತೆಯ ಬಾಚಣಕಿ ಸನಿಹ ಪೊಲೀಸ ನಾಕಾಬಂದಿಗಳನ್ನು ತೆರೆಯಲಾಗಿದೆ. ಹಿಮಾಚಲ ಪ್ರದೇಶ, ದೆಹಲಿ ಸೇರಿದಂತೆ ಹೊರರಾಜ್ಯಗಳಿಂದ ಆಗಮಿಸಿರುವ ಪೊಲೀಸರು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಪಟ್ಟಣಕ್ಕೆ ಬಂದು ಹೋಗುವ ವಾಹನಗಳನ್ನು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಸಿ.ಪಿ.ಐ ಬಿ.ಗಿರೀಶ ನೇತೃತ್ವದಲ್ಲಿ ಪೊಲೀಸರು ತಪಾಸಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.