ADVERTISEMENT

ಜಲಮೂಲ ಸಮೃದ್ಧಿ; ಸೊಸೈಟಿಯ ಸಂಕಲ್ಪ

ಕೃಷಿಕರ ನೆರವಿಗೆ ಭೈರುಂಬೆ ಸೊಸೈಟಿ; ವಿದೇಶಿ ವಿದ್ಯಾರ್ಥಿ ಅಧ್ಯಯನ ವರದಿಯೊಂದಿಗೆ ಯೋಜನೆ ಸಲ್ಲಿಕೆಗೆ ನಿರ್ಧಾರ

ಸಂಧ್ಯಾ ಹೆಗಡೆ
Published 4 ಮಾರ್ಚ್ 2018, 10:52 IST
Last Updated 4 ಮಾರ್ಚ್ 2018, 10:52 IST
ಭೈರುಂಬೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆ(ಸಾಂದರ್ಭಿಕ ಚಿತ್ರ)
ಭೈರುಂಬೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆ(ಸಾಂದರ್ಭಿಕ ಚಿತ್ರ)   

ಶಿರಸಿ: ರಚನಾತ್ಮಕ ಕೆಲಸಗಳ ಮೂಲಕ ಸಹಕಾರಿ ಕ್ಷೇತ್ರದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ತಾಲ್ಲೂಕಿನ ಭೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘವು, ಶತಮಾನೋತ್ಸವದ ಹೊಸ್ತಿಲಲ್ಲಿ ಬೃಹತ್ ನೀರಾವರಿ ಯೋಜನೆಯೊಂದನ್ನು ರೂಪಿಸಿದೆ. ಕೆರೆಗಳಿಗೆ ನೀರು ತುಂಬಿಸಿ, ತೋಟದಂಚಿನ ಜಲಮೂಲ ಸಮೃದ್ಧಗೊಳಿಸುವ ಯೋಜನೆ ಇದಾಗಿದೆ.

ಮಲೆನಾಡಿನ ತಪ್ಪಲಿನಲ್ಲಿರುವ ಭೈರುಂಬೆ, ಸುತ್ತಮುತ್ತಲಿನ ಹಳ್ಳಿಗಳು ಕಳೆದ ವರ್ಷದ ಬರಕ್ಕೆ ನಲುಗಿವೆ. ಸಾಂಪ್ರದಾಯಿಕ ಅಡಿಕೆ ತೋಟವನ್ನೇ ಆಶ್ರಯಿಸಿರುವ ಇಲ್ಲಿನ ಜನರು, ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ಕೃಷಿಕರ ನೆರವಿಗೆ ಧಾವಿಸಿರುವ ಭೈರುಂಬೆ ಸೊಸೈಟಿಯು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭಾಗವಾಗಿ, ಸಮೀಪದ ಶಾಲ್ಮಲಾ ನದಿಯ ನೀರನ್ನು ಬಳಸಿಕೊಂಡು, ಕೆರೆಗಳನ್ನು ತುಂಬಿಸುವ ಸುಮಾರು ₹ 14 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲು ಮುಂದಾಗಿದೆ. ಈ ಯೋಜನೆಯೊಂದಿಗೆ, ವಿದೇಶಿ ವಿದ್ಯಾರ್ಥಿಯೊಬ್ಬರು ನಡೆಸಿರುವ ಅಧ್ಯಯನ ವರದಿಯನ್ನು ಸೇರಿಸಿ ಸರ್ಕಾರಕ್ಕೆ ಸಲ್ಲಿಸಲು ಸೊಸೈಟಿ ಪ್ರಮುಖರು ಯೋಚಿಸಿದ್ದಾರೆ.

ಎರಡು ತಿಂಗಳುಗಳಿಂದ ಭೈರುಂಬೆ ಹಾಗೂ ಅದರ ಪಕ್ಕದ ಸದಾಶಿವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುತ್ತಾಡಿರುವ ಸೊಸೈಟಿಯ ಪ್ರಮುಖರು, ಒಟ್ಟು 40 ಕೆರೆಗಳನ್ನು ಗುರುತಿಸಿದ್ದಾರೆ. ಅದಲ್ಲಿ 25ರಷ್ಟು ಕೆರೆಗಳಲ್ಲಿ ಸಾಮಾನ್ಯ ಮಟ್ಟದಲ್ಲಿ ನೀರಿದ್ದರೆ, ಕೆಲವು ಬತ್ತುವ ಹಂತಕ್ಕೆ ಬಂದಿವೆ, ಇನ್ನು ಕೆಲವು ಹೂಳು ತುಂಬಿಕೊಂಡಿವೆ.

ADVERTISEMENT

ಅಧ್ಯಯನಕ್ಕೆ ಬಂದಿರುವ ವಿದೇಶಿ ವಿದ್ಯಾರ್ಥಿ:

ಸೊಸೈಟಿಯ ನಡೆಸುತ್ತಿರುವ ಅಧ್ಯಯನಕ್ಕೆ ಪೂರಕವಾಗಿ, ಅಮೆರಿಕ ಫ್ಲೋರಿಡಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ ಎಂ.ಎಸ್ಸಿ ವಿದ್ಯಾರ್ಥಿ ನಿಕೋಲಸ್ ಚಾರ್ಲಸ್ ಎಂಬುವರು ಭೈರುಂಬೆ ಭಾಗದ ಜಲ ಪರಿಸ್ಥಿತಿ (benchmark assessment of the water resources in Bhairumbe Gram Panchayat)ಅಧ್ಯಯನಕ್ಕೆ ಬಂದಿದ್ದಾರೆ. ಎರಡು ತಿಂಗಳು ಭೈರುಂಬೆ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿರುವ ಅವರು, ಸಮಗ್ರ ವರದಿಯನ್ನು ಇನ್ನು ಒಂದು ತಿಂಗಳಲ್ಲಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಿದ್ದಾರೆ.

‘ಶಿರಸಿ ತಾಲ್ಲೂಕು ವರ್ಗಾಸರದ ಮಹಾದೇವ ಭಟ್ ಅವರು ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ನೈಸರ್ಗಿಕ ಸಂಪನ್ಮೂಲ ಮತ್ತು ಅರ್ಥಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭೈರುಂಬೆ ಭಾಗದ ಕೆರೆಗಳು, ಜಲಮೂಲ, ಕೃಷಿ ಹಾಗೂ ಮನೆ ಬಳಕೆಗೆ ಬೇಕಾಗುವ ನೀರಿನ ಪ್ರಮಾಣದ ಕುರಿತು ಸಮೀಕ್ಷೆ ನಡೆಸಿದ್ದೇನೆ. 300 ಮನೆಗಳಿಗೆ ಭೇಟಿ ನೀಡುವ ಗುರಿಯಿತ್ತು. ಪ್ರಸ್ತುತ 200 ಮನೆಗಳ ಸಮೀಕ್ಷೆ ಮುಗಿದಿದ್ದು, ಬಹುತೇಕ ಎಲ್ಲ ಮನೆಗಳ ಸಮಸ್ಯೆ ಒಂದೇ ಆಗಿರುವುದರಿಂದ, ಇದನ್ನು ಸಾಮಾನ್ಯ ಸಮಸ್ಯೆಯೆಂದು ಪರಿಗಣಿಸಿ, ಅಧ್ಯಯನ ವರದಿ ಸಿದ್ಧಪಡಿಸುತ್ತಿದ್ದೇನೆ’ ಎಂದು ನಿಕೋಲಸ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ದಶಕದ ಹಿಂದೆ ಪರಿಸರವಾದಿ ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ಈ ಭಾಗದಲ್ಲಿ ಜೇನು, ಅರಣ್ಯ ಸಂಬಂಧಿ ಅಧ್ಯಯನಗಳು ನಡೆದಿದ್ದವು. ಒಂದೂವರೆ ದಶಕದ ನಂತರ ಮತ್ತೊಮ್ಮೆ, ನೀರಾವರಿಗೆ ಸಂಬಂಧಿಸಿ ಅಧ್ಯಯನ ನಡೆದಿದೆ. ಈ ಯೋಜನೆ ಅನುಷ್ಠಾನಗೊಂಡಲ್ಲಿ, ರೈತರು ಬೇಸಿಗೆಯಲ್ಲಿ ಬೆಳೆ ಹಾನಿಮಾಡಿಕೊಳ್ಳುವ ಸಂದರ್ಭ ತಪ್ಪುತ್ತದೆ’ ಎಂದು ಭೈರುಂಬೆ ಪ್ರಗತಿಪರ ಕೃಷಿಕ ಕೆ.ಎಂ. ಹೆಗಡೆ ಹೇಳಿದರು.
***
40 ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ

ಸಹಸ್ರಲಿಂಗದ ಮೂಲಕ ಹರಿದು ಹೋಗುವ ಶಾಲ್ಮಲಾ ನದಿಗೆ ಸಣ್ಣ ಒಡ್ಡು ಕಟ್ಟಿ, ಅಲ್ಲಿ ಸಂಗ್ರಹವಾಗುವ ನೀರನ್ನು ಗೋಳಿಕೊಪ್ಪ, ಬಸಪ್ಪನಕಟ್ಟೆಯವರೆಗೆ ತರುವುದು. ಅಲ್ಲಿ ದೊಡ್ಡ ಟ್ಯಾಂಕ್ ನಿರ್ಮಿಸಿ, ಅದರಲ್ಲಿ ನೀರನ್ನು ಸಂಗ್ರಹಿಸಿ, ಈಗಾಗಲೇ ಗುರುತಿಸಿರುವ ಕೆರೆಗಳಿಗೆ ಆ ನೀರನ್ನು ತುಂಬಿಸುವುದು. ಬಹುತೇಕ ಎಲ್ಲ ಕೆರೆಗಳು ತೋಟದ ಅಂಚಿನಲ್ಲಿರುವುದರಿಂದ, ತೋಟ, ಮನೆಗಳ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಸಮೀಪದ ಗಡೀಕೈಯಲ್ಲಿ ರೂಪಿಸಿರುವ ಇದೇ ಮಾದರಿಯ ಯೋಜನೆ ಯಶಸ್ವಿಯಾಗಿದ್ದು, 40 ಎಕರೆ ಕೃಷಿ
ಭೂಮಿಗೆ ನೀರಾವರಿಯಾಗುತ್ತಿದೆ ಎಂದು ಸೊಸೈಟಿ ಪ್ರಮುಖರು ಹೇಳುತ್ತಾರೆ.

ಯೋಜನೆಗೆ ಅನುಮತಿ ದೊರೆತರೆ, ಶೇ 80ರಷ್ಟು ಅನುದಾನ ಕೇಂದ್ರ ಸರ್ಕಾರದಿಂದ ಹಾಗೂ ಶೇ 20ರಷ್ಟು ಅನುದಾನ ರಾಜ್ಯದಿಂದ ಬರುತ್ತದೆ. ಬಸಪ್ಪನಕಟ್ಟೆವರೆಗೆ ತರುವ ಯೋಜನೆಯ ವೆಚ್ಚವನ್ನು ಸರ್ಕಾರ ಭರಿಸಿದರೆ, ಕೆರೆ ಬಳಕೆದಾರರ ಸಂಘ ರಚಿಸಿ, ಗ್ರಾಮಗಳಿಗೆ ನೀರನ್ನು ತಲುಪಿಸುವ ಯೋಜನೆಯನ್ನು ಸೊಸೈಟಿ ಅನುಷ್ಠಾನಗೊಳಿಸಲು ಸಿದ್ಧವಿದೆ ಎಂದು ಅವರು ಮುಂದಿನ ಕಾರ್ಯಯೋಜನೆ ತಿಳಿಸಿದರು.
***
ಪ್ರತಿದಿನ ಐದಾರು ಮನೆಗಳಿಗೆ ಭೇಟಿ ನೀಡುತ್ತಿದ್ದೆ. ಪ್ರತಿ ಮನೆಯಲ್ಲಿ 45 ನಿಮಿಷ ಕಳೆದು, ಮಾಹಿತಿ ಸಂಗ್ರಹಿಸುತ್ತಿದ್ದೆ. ಇದರಿಂದ ಅಲ್ಪಸ್ವಲ್ಪ ಕನ್ನಡ ಭಾಷೆ ಕಲಿತಿದ್ದೇನೆ
ನಿಕೋಲಸ್ ಚಾರ್ಲಸ್, ಅಧ್ಯಯನಕ್ಕೆ ಬಂದಿರುವ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.