ADVERTISEMENT

ಜಿಲ್ಲೆಯಲ್ಲಿ 106 ಕ್ರಿಮಿನಲ್‌ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 7:00 IST
Last Updated 15 ಡಿಸೆಂಬರ್ 2017, 7:00 IST

ಕಾರವಾರ: ‘ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್, ಫೇಸ್‌ಬುಕ್ ಮತ್ತು ಆನ್‌ಲೈನ್ ಸುದ್ದಿ ತಾಣಗಳಲ್ಲಿ ಹೊನ್ನಾವರದ ಪರೇಶ ಮೇಸ್ತ ಸಾವಿನ ಕುರಿತಾಗಿ ವದಂತಿಗಳನ್ನು ಸೃಷ್ಟಿಸಿ ಪ್ರಸಾರ ಮಾಡುವ ಹಾಗೂ ಅದನ್ನು ಹಂಚಿಕೊಳ್ಳುವವರ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇದುವರೆಗೂ ಒಟ್ಟು 106 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಆರೋಪಿತರನ್ನು ಶೀಘ್ರವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ.ಪಾಟೀಲ್ ತಿಳಿಸಿದ್ದಾರೆ.

‘ಸಾವಿನ ಕುರಿತಾಗಿ ವದಂತಿಗಳನ್ನು ಸೃಷ್ಟಿಸಿ ಹಿಂದೂ– ಮುಸ್ಲಿಂ ಭಾವೈಕ್ಯಕ್ಕೆ ನಿರಂತರವಾಗಿ ಭಂಗ ತರುವಂಥ ಪ್ರಚೋದನಾಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದು ಹಾಗೂ ಅದನ್ನು ಹಂಚಿಕೊಳ್ಳುವುದು ಗಂಭೀರ ಅಪರಾಧವಾಗಿದೆ' ಎಂದು ತಿಳಿಸಿದ್ದಾರೆ.

‘ಈ ರೀತಿ ವಾಟ್ಸ್‌ ಆ್ಯಪ್, ಫೇಸ್‌ಬುಕ್ ಮತ್ತು ಆನ್‌ಲೈನ್ ಸುದ್ದಿ ತಾಣಗಳಲ್ಲಿ ಹಿಂದೂ ಹಾಗೂ ಮುಸ್ಲಿಂ ಭಾವೈಕ್ಯವನ್ನು ಹಾಳುಗೆಡವುವವರು, ಸಮಾಜದಲ್ಲಿ ಶಾಂತಿ–ಸುವ್ಯವಸ್ಥೆ, ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಇಂಥ ಕಿಡಿಗೇಡಿಗಳ ವಿರುದ್ಧ ಭಾರತ ದಂಡ ಸಂಹಿತೆ (ಐ.ಪಿ.ಸಿ) ಕಲಂ 153,153 (ಎ), 505, 295 (ಎ), 504, 506 ಹಾಗೂ ಮಾಹಿತಿ ತಂತ್ರಜ್ಞಾನ (ಐ.ಟಿ) ಕಾಯ್ದೆ 2008ರಂತೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಅದರಲ್ಲಿ ಹಲವರನ್ನು ಈಗಾಗಲೇ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಕಿಡಿಗೇಡಿಗಳು ತಮ್ಮ ವಿಕೃತ ಮನೋಕಾಮನೆಗಳನ್ನು ತೀರಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅಂಥವರ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಉನ್ನತ ಮಟ್ಟದಲ್ಲಿ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣದ ನಿರ್ವಹಣಾ ತಂತ್ರಾಂಶದ ಮೂಲಕ ನಿರಂತರವಾಗಿ ತೀವ್ರ ನಿಗಾ ಇರಿಸಿದೆ’ ಎಂದು ತಿಳಿಸಿದ್ದಾರೆ.

‘ಯಾವುದು ಸತ್ಯ ಹಾಗೂ ಯಾವುದು ಸುಳ್ಳು ಎಂದು ಅಧಿಕೃತವಾಗಿ ಮಾಹಿತಿ ಪಡೆದುಕೊಳ್ಳದೇ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಮಾಹಿತಿಗಳನ್ನು ನಂಬಬಾರದು. ಆ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕಾಪಾಡಲು ಸಹಕರಿಸಬೇಕು’ ಎಂದು ಅವರು ಕೋರಿದ್ದಾರೆ.

* * 

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಹಾಗೂ ಪ್ರಚೋದನಾಕಾರಿ ಸಂದೇಶಗಳಿಗೆ ಸಾರ್ವಜನಿಕರು ಕಿವಿಗೊಡಬಾರದು.
ವಿನಾಯಕ ವಿ.ಪಾಟೀಲ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.