ADVERTISEMENT

`ಜೀತಕ್ಕೆ ಒತ್ತಾಯಿಸಿದರೆ ಜೈಲು ಶಿಕ್ಷೆ'

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 11:42 IST
Last Updated 18 ಜೂನ್ 2013, 11:42 IST

ಶಿರಸಿ: `ಜೀತ ಪದ್ಧತಿ ರದ್ದತಿ ಕಾನೂನಿನ ಅನ್ವಯ ಜೀತಕ್ಕೆ ಒತ್ತಾಯಿಸಿದರೆ, ಜೀತಸಾಲ ನೀಡಿದರೆ ಹಾಗೂ ಜೀತಸಾಲಕ್ಕೆ ಸಂದಾಯ ಸ್ವೀಕರಿಸುವ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆಯಾಗುತ್ತದೆ' ಎಂದು ಜೀತ ವಿಮುಕ್ತ ಕರ್ನಾಟಕ (ಜೀವಿಕ) ಸಂಘಟನೆಯ ಸಂಚಾಲಕ ರಾಮಸ್ವಾಮಿ ಹೇಳಿದರು.

ಜೀತ ಪದ್ಧತಿ ನಿರ್ಮೂಲನೆ ಕುರಿತು ಇಲ್ಲಿನ ಮಿನಿವಿಧಾನಸೌಧದಲ್ಲಿ ಸೋಮವಾರ ಅಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. `ಬಲಾತ್ಕಾರ ಅಥವಾ ಭಾಗಶಃ ಬಲತ್ಕಾರ ದುಡಿಮೆಯ ಜೀತ ಪದ್ಧತಿ ಇಂದಿಗೂ ಜೀವಂತವಾಗಿದೆ.

1976ರಲ್ಲಿ ಜೀತ ಪದ್ಧತಿ ರದ್ದತಿ ಕಾನೂನು ಜಾರಿಯಾಗಿದ್ದರೂ ನಿರಂತರ ಉಲ್ಲಂಘನೆಯಾಗುತ್ತಿದೆ. ಜೀತ ಪದ್ಧತಿ ಅಲ್ಲಗಳಿಯುತ್ತಿದ್ದ ಸರ್ಕಾರ 2000 ಇಸವಿಯಲ್ಲಿ ನಡೆದ ಹಂಗರಹಳ್ಳಿಯ ಸಂಕೋಲೆ ಹಾಕಿದ ಪ್ರಕರಣದ ನಂತರ ಎಚ್ಚೆತ್ತುಕೊಂಡಿದೆ. ಜೀತ ಪದ್ಧತಿ ಕುರಿತು ಸದಾ ಎಚ್ಚರದಿಂದ ಇದ್ದರೂ ಅಲ್ಲಲ್ಲಿ ಪ್ರಕರಣಗಳು ಪತ್ತೆಯಾಗುತ್ತವೆ. ಈ ಪದ್ಧತಿ ನಿರ್ಮೂಲನೆಗೆ ಸಮಾಜದ ಸಹಕಾರ ಅಗತ್ಯವಾಗಿದೆ' ಎಂದರು.

`ಜೀತ ಪದ್ಧತಿ ಬಗ್ಗೆ ನಿರಂತರ ಸಮೀಕ್ಷೆ ಕೈಕೊಂಡು ಪ್ರಾಮಾಣಿಕ ಜೀತದಾಳುಗಳನ್ನು ಗುರುತಿಸಲು ಕ್ಷೇತ್ರ ಮಟ್ಟದಲ್ಲಿ ಕಾರ್ಯಪಡೆ ರಚಿತವಾಗಬೇಕು.

ಜಿಲ್ಲಾಧಿಕಾರಿಯಿಂದ ಜಾಗೃತಿ ಸಮಿತಿ ರಚಿತವಾಗಬೇಕು. ಜೀತದಾಳು ಗುರುತಿಸಿ, ಬಿಡುಗಡೆಗೊಳಿಸಿ ಅವರ ಪುನರ್ವಸತಿಗಾಗಿ ಜಿಲ್ಲಾಧಿಕಾರಿ ಅಧೀನದಲ್ಲಿರುವ ಅಧಿಕಾರಿಗಳಿಗೆ ಸೂಖ್ತ ಅಧಿಕಾರ ನೀಡಿ ಅವರನ್ನು ನಿಯೋಜಿಸುವಂತಾಗಬೇಕು. ಕಾವಲು ಸಮಿತಿಗಳು, ಜಿಲ್ಲೆಯ ಎಲ್ಲಾ ಮಟ್ಟದ ಪಂಚಾಯ್ತಿಗಳ ಸಾಮಾಜಿಕ ನ್ಯಾಯ ಸಮಿತಿಗಳು, ಸ್ವಯಂ ಸೇವಾ ಸಂಸ್ಥೆಗಳನ್ನು ಒಳಗೊಂಡು ಸಮಗ್ರ ರೀತಿಯಲ್ಲಿ ಜೀತಪದ್ಧತಿಯ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಬೇಕು.

ರಾಜ್ಯ ಸರ್ಕಾರವು ಸೂಕ್ಷ್ಮ ಪ್ರದೇಶಗಳಲ್ಲಿ ಜೀತಪದ್ಧತಿ ಕುರಿತು ಕೌಟುಂಬಿಕ ಸಮೀಕ್ಷೆಯನ್ನು ನಿಗದಿತ ಕಾಲಮಟ್ಟದಲ್ಲಿ ನಡೆಸಬೇಕು. ಜೀತದಾಳು ಗುರುತಿಸಲು ನೇಮಿಸಿದ ಕೇಂದ್ರ ಸಮಿತಿ ಈ ಎಲ್ಲ ಶಿಫಾರಸುಗಳನ್ನು ಮಾಡಿದೆ' ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾರುಕಟ್ಟೆ ಪೊಲೀಸ್ ಠಾಣೆ ಪಿಎಸ್‌ಐ ಮಹಮ್ಮದ್ ಸಲೀಂ, ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಜೀವಿಸುವ ಸ್ವಾತಂತ್ರ್ಯವಿದ್ದು, ಅದನ್ನು ನಿರ್ಬಂಧಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು. ಪ್ರಭಾರ ತಹಶೀಲ್ದಾರ್ ತುಳಸಿ ಪಾಲೇಕರ, ಜೀವಿಕ ಸಂಘಟನೆಯ ರಾಮಸ್ವಾಮಿ, ಕಿರಣಕುಮಾರ, ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.