ಮುಂಡಗೋಡ: ಟಿಬೆಟನ್ ಧರ್ಮಗುರು ದಲೈಲಾಮ 17ರಂದು ಟಿಬೆಟನ್ ಕ್ಯಾಂಪ್‌ಗೆ ಆಗಮಿಸುವ ಹಿನ್ನೆಲೆಯಲ್ಲಿ ನಿರಾಶ್ರಿತರ ನೆಲೆಗಳಲ್ಲಿ ಸಂಭ್ರಮದ ವಾತಾವರಣ ಮೂಡಿದ್ದು ಧರ್ಮಗುರುವಿನ ಸ್ವಾಗತಕ್ಕೆ ಬೌದ್ಧ ಬಿಕ್ಕುಗಳು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಟಿಬೆಟನ್ ಕ್ಯಾಂಪ್‌ಗೆ ಹೋಗುವ ಮಾರ್ಗದುದ್ದಕ್ಕೂ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದ್ದು ಪಟ್ಟಣದ ಅಮ್ಮಾಜಿ ಕೆರೆಯ ಹತ್ತಿರದಲ್ಲಿ ಸ್ವಾಗತ ಕಮಾನುಗಳು ತಲೆ ಎತ್ತಿವೆ. ಕ್ಯಾಂಪ್ ನಂ.1ರ ಪ್ರವೇಶ ದ್ವಾರದಿಂದ ಕ್ಯಾಂಪ್ ನಂ.6ರವರೆಗೆ ಸ್ವಾಗತ ಕಮಾನುಗಳು ಧರ್ಮಗುರುವಿನ ಸ್ವಾಗತಕ್ಕೆ ಸಜ್ಜಾಗಿವೆ. ರಸ್ತೆಯ ಎರಡೂ ಬದಿಗೆ ಬೆಳೆದಿರುವ ಹುಲ್ಲನ್ನು ಕಟಾವು ಮಾಡಿ ಸ್ವಚ್ಛ ಮಾಡಲಾಗುತ್ತಿದೆ.
ನಿರಾಶ್ರಿತರ ನೆಲೆಗಳಲ್ಲಿ ಉಲ್ಲಾಸದ ವಾತಾವರಣ ಕಂಡುಬಂದಿದ್ದು ಪ್ರತಿ ಅಂಗಡಿ, ಮನೆಯ ಎದುರಿಗೆ ಸಿಂಗಾರ ಮಾಡಲಾಗುತ್ತಿದೆ. ಕೆಲಸದ ನಿಮಿತ್ತ ಬೇರೆಡೆ ತೆರಳಿದ್ದ ಸ್ಥಳೀಯ ಟಿಬೆಟನ್‌ರು ಕ್ಯಾಂಪ್ ಕಡೆ ಮುಖ ಮಾಡಿದ್ದು ಧರ್ಮಗುರುವಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ.
ಸಿಂಗಾರಗೊಳ್ಳುತ್ತಿರುವ ಬೌದ್ಧ ಮಂದಿರಗಳು:ಕ್ಯಾಂಪ್ ನಂ.6ರ ಡ್ರೆಪುಂಗ್ ತಾಶಿ ಗೋಮಾಂಗ್ ಮೊನ್ಯಾಸ್ಟಿಕ್ ವಿದ್ಯಾಲಯ, ಡ್ರೆಪುಂಗ್ ಲೋಸಲಿಂಗ್ ಬೌದ್ಧ ಮಂದಿರ ಸೇರಿದಂತೆ ವಿವಿಧ ಬೌದ್ಧ ಮಂದಿರಗಳಲ್ಲಿ ಭರದಿಂದ ಕೆಲಸ ಸಾಗಿದ್ದು ಬೌದ್ಧ ಬಿಕ್ಕುಗಳು ಧರ್ಮಗುರುವಿನ ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯ ಕೆಲಸಗಳಲ್ಲಿ ನಿರತರಾಗಿದ್ದಾರೆ. ಡ್ರೆಪುಂಗ್ ಬೌದ್ಧ ಮಂದಿರದ ಆವರಣದಲ್ಲಿ ಟಿಬೆಟ್ ಧ್ವಜವು ಸೇರಿದಂತೆ ಬಣ್ಣ ಬಣ್ಣದ ಧ್ವಜಗಳು ಹಾರಾಡುತ್ತಿದ್ದು ಕಳೆಗುಂದಿದ ಆವರಣದಲ್ಲಿ ಮುಗಿಲೆತ್ತರದ ಧ್ವಜಗಳು ರಾರಾಜಿಸುತ್ತಿವೆ. ಬೌದ್ಧ ಮಂದಿರದ ತುದಿಯಿಂದ ಆವರಣದ ಸ್ತಂಭದವರೆಗೆ ಉದ್ದನೆಯ ಧ್ವಜಗಳ ಸಾಲು ಧರ್ಮಗುರುವಿನ ಸ್ವಾಗತಕ್ಕೆ ಕೈಬೀಸಿ ಕರೆಯಿತ್ತಿದೆ. ಬೌದ್ಧ ಮಂದಿರದ ಮೇಲ್ಭಾಗದಲ್ಲಿ ಬೌದ್ಧ ಬಿಕ್ಕುಗಳು ಸ್ವಚ್ಛತೆಯಲ್ಲಿ ತೊಡಗಿದ್ದರು.
ಡ್ರೆಪುಂಗ್ ತಾಶಿ ಗೋಮಾಂಗ್ ವಿದ್ಯಾಲಯದ ಆವರಣದಲ್ಲಿ ಬೌದ್ಧ ಬಿಕ್ಕುಗಳು ಟಿಬೆಟನ್ ಸಂಪ್ರದಾಯದಂತೆ ಚಿತ್ರಗಳನ್ನು ಬಿಡಿಸಿ ಬಣ್ಣ ತುಂಬುವದರಲ್ಲಿ ನಿರತರಾಗಿದ್ದರು. ಪ್ರವೇಶ ದ್ವಾರದಿಂದ ಬೌದ್ಧ ಮಂದಿರದವರೆಗೆ ಚಿತ್ತಾಕರ್ಷಕ ಚಿತ್ರ ಬಿಡಿಸಿ ಬಣ್ಣ ತುಂಬಲಾಗಿದೆ.
ಟಿಬೆಟನ್ ಧರ್ಮಗುರು ದಲೈಲಾಮಾ ಗೋಮಾಂಗ್ ಹಾಗೂ ಲೋಸಲಿಂಗ್ ಬೌದ್ಧ ಮಂದಿರದಲ್ಲಿ ಸುಮಾರು ಎಂಟು ದಿನಗಳ ಕಾಲ ಬೌದ್ಧ ಬಿಕ್ಕುಗಳಿಗೆ ಧರ್ಮ ದೀಕ್ಷೆ ನೀಡಲಿದ್ದಾರೆ. ಸುಮಾರು 800 ಬೌದ್ಧ ಬಿಕ್ಕುಗಳು ಧರ್ಮಗುರುವಿನಿಂದ ಧರ್ಮಾಧಿಕಾರದ ದೀಕ್ಷೆ ಪಡೆಯುವ ಸಾಧ್ಯತೆಯಿದೆ ಎಂದು ಟಿಬೆಟನ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.