ADVERTISEMENT

ಟಿ.ವಿ. ಕೇಬಲ್ ಮೂಲಕ ಹರಿದ ವಿದ್ಯುತ್: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 10:40 IST
Last Updated 19 ಜೂನ್ 2013, 10:40 IST

ಅಂಕೋಲಾ: ಟಿ.ವಿ.ಗೆ ಕೇಬಲ್ ಅಳವಡಿಸುತ್ತಿರುವ ಸಂದರ್ಭದಲ್ಲಿ ಕೇಬಲ್‌ಗೆ ವಿದ್ಯುತ್ ಪ್ರವಹಿಸಿ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮತಪಟ್ಟ ಘಟನೆ ತಾಲ್ಲೂಕಿನ ಮಂಜಗುಣಿಯಲ್ಲಿ ಸೋಮವಾರ ನಡೆದಿದೆ.

ಶಾರದಾ ಗೋಪಾಲ ನಾಯ್ಕ (47) ಮೃತ ಮಹಿಳೆ. ಇವರು ಕೃಷಿ ಕೆಲಸ ಮುಗಿಸಿಕೊಂಡು ಸಂಜೆ 6.30ರ ಸುಮಾರಿಗೆ ಮನೆಗೆ ಬಂದು ಟಿ.ವಿ. ಹಚ್ಚುವುದಕ್ಕಾಗಿ ಕೇಬಲ್ ಹಿಡಿದಾಗ ವಿದ್ಯುತ್ ಶಾಕ್ ತಗುಲಿ ಉರುಳಿಬಿದ್ದ ಹೊಡೆತಕ್ಕೆ ತಲೆಭಾಗಕ್ಕೂ ಕೂಡ ಗಂಭೀರ ಗಾಯವಾಗಿದೆ.

ಅವರಿಗೆ ಪತಿ ಹಾಗೂ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿನಲ್ಲಿ ಅಕ್ರಮ ಸಾಗಣೆ : ಗೋವಾ ಮದ್ಯ ವಶ
ಭಟ್ಕಳ: ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಗೋವಾ ರಾಜ್ಯದ ಮದ್ಯದ ಬಾಟಲಿಗಳನ್ನು ಇಲ್ಲಿನ ಅಬಕಾರಿ ಅಧಿಕಾರಿಗಳು ಹಾಗೂ ರೈಲ್ವೆ ಪೊಲೀಸರು ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ.

ಸುಮಾರು 67,200 ರೂಪಾಯಿ ಮೌಲ್ಯದ 1680ರಷ್ಟು ಗೋವಾ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೋಮವಾರ ಬೆಳಗಿನ ಜಾವ ಭಟ್ಕಳದ ಕಡೆಗೆ ಬರುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮದ್ಯ ಸಾಗಣೆ ಮಾಡಲಾಗುತ್ತಿರುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ಹಾಗೂ ರೈಲ್ವೆ ಪೊಲೀಸರು ತಪಾಸಣೆ ನಡೆಸಿದರು. ಆದರೆ ರೈಲಿನಲ್ಲಿ ಸಾಗಣೆ ಮಾಡಿದ್ದ ಮದ್ಯದ ಬಾಟಲಿಗಳನ್ನು ನಂತರ ಕೊಂಡೊಯ್ಯುವ ಉದ್ದೇಶದಿಂದ ರೈಲ್ವೆ ನಿಲ್ದಾಣದ ಸಮೀಪ ಹೊರಗಡೆ ಎಸೆದು ಆರೋಪಿಗಳು ನಾಪತ್ತೆಯಾಗಿದ್ದರು.

ಇದನ್ನು ಅಬಕಾರಿ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೈಲ್ವೆ ಪೊಲೀಸ್ ಇಲಾಖೆಯ ಎಎಸ್‌ಪಿ ಉಮೇಶ್, ಪಿಎಸ್‌ಐ ಡಿ.ಆರ್.ಸುಬ್ರಹ್ಮಣ್ಯ,ಅಬಕಾರಿ ಎಸ್‌ಐ ಜೆ.ಡಿ.ಆನಂದ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಚರ್ಚ್‌ನಲ್ಲಿ ಕಳವು: ಆರೋಪಿ ಬಂಧನ
ಭಟ್ಕಳ: ಮುರ್ಡೇಶ್ವರದ ಚಂದ್ರಹಿತ್ಲುವಿನಲ್ಲಿರುವ ಚರ್ಚ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಸರವನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಮುರ್ಡೇಶ್ವರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಮುರ್ಡೇಶ್ವರದ ಭಟ್ರಹಿತ್ಲುವಿನ ಜಾನ್ ಜುಮ್ಮಾಂವ್  ಎಂದು ಗುರುತಿಸಲಾಗಿದೆ.

ಆರೋಪಿ ಕಳೆದ ಫೆಬ್ರವರಿಯಲ್ಲಿ ಚಂದ್ರಹಿತ್ಲು ಚರ್ಚ್‌ನಲ್ಲಿ 10ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರ ಹಾಗೂ 3.500 ರೂಪಾಯಿ ಮೌಲ್ಯದ ಬೆಳ್ಳಿಯ ಸರವನ್ನು ಕದ್ದು ಪರಾರಿಯಾಗಿದ್ದನು. ಕಳ್ಳತನದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿ ಜಾನ್ ಕದ್ದ ಚಿನ್ನ, ಬೆಳ್ಳಿಯ ಸರವನ್ನು ಮಂಗಳೂರಿನ ಫೈನಾನ್ಸ್ ಒಂದರಲ್ಲಿ 5500 ರೂಪಾಯಿಗೆ ಅಡವು ಇಟ್ಟಿದ್ದನು. ಅದನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.