ADVERTISEMENT

ಡೇರೆ ಹೂ ಮೇಳ 13ರಂದು

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 12:44 IST
Last Updated 11 ಜುಲೈ 2013, 12:44 IST

ಶಿರಸಿ: ಮಳೆಯ ಸಿಂಚನಕ್ಕೆ ಅಂಗೈ ಅಗಲದ ಹೂ ಅರಳಿಸಿ ಡೇರೆ ಹೂಗಳು ಹಳ್ಳಿಮನೆಯ ಕೈತೋಟದ ಕಣ್ಸೆಳೆಯುತ್ತವೆ. ಹಳ್ಳಿ ಹೆಂಗಳೆಯರು ಪ್ರೀತಿಯಿಂದ ಬೆಳೆಸಿದ ಡೇರೆ ಹೂಗಳು ಮಾರುಕಟ್ಟೆಯ ಹಾದಿಯನ್ನು ಕಾಣಲು ಪ್ರಾರಂಭಿಸಿವೆ. ಹತ್ತಾರು ಬಣ್ಣಗಳಲ್ಲಿ ಅಂಗಳದಲ್ಲಿ ಅರಳುವ ಡೇರೆ ಹೂಗಳಿಗೆ ಮಾರುಕಟ್ಟೆ ಒದಗಿಸಿ ಗಿಡ ನೆಟ್ಟು ಪೋಷಿಸಿದ ಮಹಿಳೆಯರಿಗೆ ಉಪ ಆದಾಯ ಕಲ್ಪಿಸುವ ದೃಷ್ಟಿಯಿಂದ ಇದೇ 13ರಂದು ನಗರದಲ್ಲಿ ಡೇರೆ ಮೇಳ ಆಯೋಜಿಸಲಾಗಿದೆ.

ಹಳ್ಳಿ ಹೆಂಗಳೆಯರು ಹವ್ಯಾಸಕ್ಕಾಗಿ ಬೆಳೆಸಿದ ಡೇರೆ ಮಾರುಕಟ್ಟೆಯನ್ನು ಆಕರ್ಷಿಸಿದೆ. ಈ ಹಿನ್ನೆಲೆಯಲ್ಲಿ ಡೇರೆ ಕೃಷಿ ಮಹಿಳೆಯರಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಜೊತೆಗೆ ತಳಿಗಳ ಪ್ರದರ್ಶನ ಹಾಗೂ ಮಾರಾಟದ ಉದ್ದೇಶದಿಂದ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮೇಳದ ಸಂಘಟಕರಾದ ಅಂಜನಾ ಭಟ್ಟ, ವೇದಾವತಿ ಹೆಗಡೆ ನಗರದ ಯೋಗಮಂದಿರದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

`75ಕ್ಕೂ ಅಧಿಕ ಜಾತಿಯ ಡೇರೆ ಹೂಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ. ಒಂದೇ ಸ್ಥಳದಲ್ಲಿ ಬಗೆ ಬಗೆಯ ತಳಿಗಳ ಡೇರೆ, ಇತರ ಜಾತಿಯ ಗಿಡಗಳು ಹಾಗೂ ಹೂವಿನ ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಗೆ ಹೂಗಳನ್ನು ಪೂರೈಸುವ ವ್ಯವಸ್ಥೆಯ ಕುರಿತು ಮೇಳ ಸಹಕಾರಿಯಾಗಲಿದೆ. ಸುಮಾರು 150ರಷ್ಟು ಕುಂಡಗಳಲ್ಲಿ ಬೆಳೆಸಿದ ಡೇರೆ ಹೂವಿನ ಗಿಡಗಳಿದ್ದು ಇವನ್ನು ಪ್ರದರ್ಶಿಸಲಾಗುವುದು' ಎಂದರು.

`ನಿರಂತರ ಎರಡು ವರ್ಷಗಳಿಂದ ಮೇಳ ಆಯೋಜಿಸಿದ್ದ ಪರಿಣಾಮವಾಗಿ ಡೇರೆ ಕೃಷಿ ಮಾಡಲು ಮಹಿಳೆಯರು ಉತ್ಸುಕರಾಗಿದ್ದಾರೆ. ಡೇರೆ ಹೂವಿಗೆ ಮೇಳದ ಕಲ್ಪನೆ ದೊರೆತಿದ್ದರಿಂದ ಹೂ ಹಾಗೂ ಗಿಡಗಳಿಗೆ ಬೇಡಿಕೆ ಹೆಚ್ಚಿದೆ. ಮಹಿಳೆಯರ ಜೊತೆ ಪುರುಷರು ಸಹ ಡೇರೆ ಕೃಷಿ ಮಾಡುತ್ತಿದ್ದಾರೆ. ಶ್ರಾವಣ ಮಾಸದ ವೇಳೆ ಒಂದು ಡೇರೆ ಹೂವಿಗೆ 50 ರೂಪಾಯಿ ವರೆಗೆ ದರ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಗಿಡಗಳ ನರ್ಸರಿ ಮಾಡಲು ಈ ಬಾರಿ ಮೇಳದಲ್ಲಿ ವಿಶೇಷ ತರಬೇತಿ ಆಯೋಜಿಸಲಾಗಿದೆ. ತೋಟಗಾರಿಕಾ ಕಾಲೇಜಿನ ಸಹಯೋಗದಲ್ಲಿ ವೈಜ್ಞಾನಿಕ ಪುಷ್ಪ ಕೃಷಿ  ವಿಧಾನಗಳ ಕುರಿತು ತರಬೇತಿ ನೀಡಲಾಗುವುದು. ಮೇಳಕ್ಕೆ ಮಾರಾಟಕ್ಕೆ ತರುವ ಗಿಡಗಳಿಗೆ ಏಕರೂಪದ ದರ ನಿಗದಿಗೊಳಿಸಲಾಗುವುದು. ಇದರಂದ ಮಾರುಕಟ್ಟೆಯಲ್ಲಿ ದರ ಸ್ಥಿರತೆಗೆ ಅನುಕೂಲವಾಗಲಿದೆ' ಎಂದರು.

ಪತ್ರಿಕಾಗೋಷ್ಠಿಯಲ್ಲಿ ಇನ್ಹರ್‌ವೀಲ್‌ನ ರಾಜಲಕ್ಷ್ಮಿ ಹೆಗಡೆ, ಲತಾ ಹೆಗಡೆ, ಲಯನೆಸ್ ಸಂಸ್ಥೆಯ ಗಂಗಾ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.

ಉದ್ಘಾಟನೆ: ಸ್ವರ್ಣವಲ್ಲಿ ಮಾತೃಮಂಡಳಿ, ಲಯನೆಸ್ ಕ್ಲಬ್ ಹಾಗೂ ಇನ್ಹರ್‌ವೀಲ್ ಕ್ಲಬ್ ಜಂಟಿ ಆಶ್ರಯದಲ್ಲಿ ಯೋಗಮಂದಿರದಲ್ಲಿ ಹಮ್ಮಿಕೊಂಡಿರುವ ಮೇಳವನ್ನು 13ರ ಬೆಳಿಗ್ಗೆ 10.30 ಗಂಟೆಗೆ ಪರಿಸರ ಹೋರಾಟಗಾರ್ತಿ ವಾಸಂತಿ ಹೆಗಡೆ ಉದ್ಘಾಟಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.