ADVERTISEMENT

ತಂತ್ರಜ್ಞಾನದ ಸದ್ಬಳಕೆಗೆ ವಿದ್ಯಾರ್ಥಿಗಳ ‘ಮಾದರಿ’

ಜೀಜಾಬಾಯಿ ಸೈಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಜ್ಞಾನ ಮಾದರಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ಮೇ 2018, 12:34 IST
Last Updated 9 ಮೇ 2018, 12:34 IST
ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾದ ಸಂದೀಪ್ ಭಟ್ ಹಾಗೂ ರುಪಾರ್ತೊ ಬ್ರಗಾಂಜಾ ತಾವು ಅಭಿವೃದ್ಧಿ ಪಡಿಸಿದ ಮಾದರಿಯನ್ನು ವಿವರಿಸಿದರು.
ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾದ ಸಂದೀಪ್ ಭಟ್ ಹಾಗೂ ರುಪಾರ್ತೊ ಬ್ರಗಾಂಜಾ ತಾವು ಅಭಿವೃದ್ಧಿ ಪಡಿಸಿದ ಮಾದರಿಯನ್ನು ವಿವರಿಸಿದರು.   

ಕಾರವಾರ: ಅಪಘಾತವಾದರೆ ಅದರ ತೀವ್ರತೆ, ಸ್ಥಳ, ವಾಹನದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಆಂಬುಲೆನ್ಸ್‌ಗೆ ರವಾನೆ, ಪಾರ್ಶ್ವವಾಯು ಪೀಡಿತ ರೋಗಿಗಳ ಬೆರಳು ಸಂಜ್ಞೆಯ ಮೂಲಕ ಸಂಬಂಧಿಗಳ ಜತೆ ಸಂವಹನ... ಮುಖ ಚಹರೆ ಗುರುತಿಸಿದ ಮೇಲೆ ವಾಹನದ ಎಂಜಿನ್ ಸ್ವಿಚ್ ಆನ್ ಆಗುವ ತಂತ್ರಜ್ಞಾನ...!

ಇಂತಹ ಹಲವು ಮಾದರಿಗಳನ್ನು ತಾಲ್ಲೂಕಿನ ಮಾಜಾಳಿ ಸಮೀಪದ ಜೀಜಾಬಾಯಿ ಸೈಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೊನೆಯ ಸೆಮಿಸ್ಟರ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಕಾಲೇಜಿನಲ್ಲಿ ಏರ್ಪಡಿಸಿರುವ ಮಾದರಿಗಳ ಪ್ರದರ್ಶನದಲ್ಲಿ ಇವು ಗಮನ ಸೆಳೆಯುತ್ತಿವೆ.

ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾದ ಸಂದೀಪ್ ಭಟ್ ಹಾಗೂ ರುಪಾರ್ತೊ ಬ್ರಗಾಂಜಾ ಅಭಿವೃದ್ಧಿ ಪಡಿಸಿರುವ ‘ಆಕ್ಸೆಲೋಮೀಟರ್ ಬೇಸ್ಡ್ ವೆಹಿಕಲ್ ಸೇಫ್ಟಿ ಸಿಸ್ಟಮ್ಸ್’ ವಿಶೇಷವಾಗಿದೆ. ವಾಹನ ಪಲ್ಟಿಯಾದರೆ ಅದರಲ್ಲಿರುವ ಸೆನ್ಸರ್ ಅಪಘಾತದ ತೀವ್ರತೆಯನ್ನು ಆಧರಿಸಿ ಆಂಬುಲೆನ್ಸ್‌ಗಳಿಗೆ ಸಂದೇಶ ಕಳುಹಿಸುತ್ತದೆ. ಅಪಘಾತವಾಗಿ ನುಜ್ಜುಗುಜ್ಜಾದರೆ ಅದನ್ನೂ ದಾಖಲಿಸಿ ಮಾಹಿತಿ ರವಾನೆ ಮಾಡುತ್ತದೆ. ಈ ಸಾಧನದಲ್ಲಿ ಜಿಪಿಎಸ್ ಅಳವಡಿಸಿರುವ ಕಾರಣ ವಾಹನವಿರುವ ಸ್ಥಳವನ್ನೂ ನಿಖರವಾಗಿ ಗುರುತಿಸಲು ಸಾಧ್ಯವಿದೆ.

ADVERTISEMENT

‘ಅಪಘಾತಗಳಾಗುವ ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ಸಿಗದೇ ಮೃತಪಡುವವರ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಮನಗಂಡು ನಾವು ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದೇವೆ’ ಎನ್ನುತ್ತಾರೆ ಅವರು.

ಅಂಕಿತಾ ಕದಂ, ನೇಹಾ ರಾಣಿ, ಶ್ರದ್ಧಾ ವೆರ್ಣೇಕರ್, ಆಸ್ಮಾ ಗೌಡ ಅವರ ತಂಡವು ಪಾರ್ಶ್ವವಾಯು ಪೀಡಿತರಿಗೆ ಸಹಾಯವಾಗುವ ರೀತಿಯ ಸಾಧವನ್ನು ಅಭಿವೃದ್ಧಿಪಡಿಸಿದೆ.

‘ಪಾರ್ಶ್ವವಾಯು ಹಾಗೂ ವಿವಿಧ ರೋಗಗಳಿಂದ ತೊಂದರೆಗೆ ಒಳಗಾದವರಿಗೆ ಸ್ವಯಂ ನಿಗಾ ವಹಿಸಲು ಸಹಕಾರಿಯಾಗುವ ತಂತ್ರಜ್ಞಾನವಿದು. ಸೆನ್ಸರ್‌ಗಳನ್ನು ಅಳವಡಿಸಿರುವ ಕೈಗವಸುಗಳನ್ನು ರೋಗಿಗಳು ಧರಿಸಿಕೊಳ್ಳಬೇಕು. ಅದರ ಮೂಲಕ ಅವರು ಬೆರಳುಗಳ ಮೂಲಕ ಬೇರೆ ಬೇರೆ ಸಂಜ್ಞೆಗಳನ್ನು ಮಾಡಬಹುದು. ಸೆನ್ಸರ್‌ಗಳು ರೋಗಿಯ ಆರೈಕೆ ಮಾಡುವವರ ಮೊಬೈಲ್‌ಗೆ ಸಂದೇಶ ಕಳುಹಿಸುತ್ತವೆ. ಇದರಿಂದ ರೋಗಿಗೆ ಏನು ಬೇಕಾಗಿದೆ ಎಂದು ತಿಳಿದುಕೊಂಡು ಉತ್ತಮ ಆರೈಕೆ ಮಾಡಲು ಸಾಧ್ಯ’ ಎನ್ನುತ್ತಾರೆ ತಂಡದ ಸದಸ್ಯೆಯರು.

ವಾಹನ ಕಳವು ತಡೆಯಲು ಮುಖ ಚಹರೆ ಕಂಡುಹಿಡಿಯುವ ಸಾಧನ, ರಸ್ತೆಯಲ್ಲಿ ನಿಗದಿಪಡಿಸಿರುವ ವೇಗಮಿತಿಯಲ್ಲೇ ವಾಹನಗಳ ಚಾಲನೆಗೆ ನಿರ್ಬಂಧಿಸುವ ತಂತ್ರಜ್ಞಾನ, ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾಗುವಂತಹ ಹೆಲ್ಮೆಟ್, ರೋಬೋಟ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುವ ಕೈ, ಕಟ್ಟಡ ನಿರ್ಮಾಣದಲ್ಲಿ ಸಿಮೆಂಟ್, ಜಲ್ಲಿಕಲ್ಲುಗಳ ಬಳಕೆ ಕಡಿಮೆ ಮಾಡುವ ಕುರಿತಾದ ಮಾದರಿಗಳು ಗಮನ ಸೆಳೆದವು.

ಐದು ಮಾದರಿಗಳಿಗೆ ಪ್ರಾಯೋಜಕತ್ವ

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ 41ನೇ ಸರಣಿಯಲ್ಲಿ ಪ್ರಾಯೋಜಕತ್ವ ಪಡೆದುಕೊಂಡಿರುವ ಐದು ಮಾದರಿಗಳು ಗಮನಾರ್ಹವಾಗಿವೆ. ಕಂಪ್ಯೂಟರ್ ಸೈನ್ಸ್, ಸಿವಿಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಹಾಗೂ ಮೆಕಾನಿಕಲ್ ವಿಭಾಗಗಳ ಮಾದರಿಗಳು ಪ್ರದರ್ಶನವು ಬುಧವಾರವೂ ಮುಂದುವರಿಯಲಿವೆ.

**
ಈಚಿನ ದಿನಗಳಲ್ಲಿ ರಸ್ತೆ ಅಪಘಾತಗಳಲ್ಲಿ ಮೃತ ಪಡುತ್ತಿರುವವರಲ್ಲಿ ಯುವಕರೇ ಅಧಿಕ. ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ವಿದ್ಯಾರ್ಥಿಗಳು ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದಾರೆ
– ಸುರೇಶ್ ಡಿ ಮಾನೆ, ಪ್ರಾಂಶುಪಾಲ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.