ADVERTISEMENT

ದಲಿತ ದೌರ್ಜನ್ಯ ಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 8:44 IST
Last Updated 11 ಜೂನ್ 2013, 8:44 IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯನ್ನು ದಲಿತ ದೌರ್ಜನ್ಯ ಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳು ಇದೇ 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿವೆ ಎಂದು ದಲಿತಪರ ಸಂಘಟನೆಗಳ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಚಂದ್ರಕಾಂತ ಕಾದ್ರೋಳ್ಳಿ ತಿಳಿಸಿದರು.

ನಗರದ ಪ್ರವಾಸಿಗೃಹದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ದಲಿತರ ಸಮಸ್ಯೆಗಳ ಬಗ್ಗೆ ಇನ್ನೂ ಯಾವುದೇ ರೀತಿ ಅಧ್ಯಯನ ಮಾಡಿಲ್ಲ. ಅಧಿಕಾರಿಗಳು ಒಂದಿಲ್ಲೊಂದು ರೀತಿಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ' ಎಂದರು.

`ಜಿಲ್ಲಾಧಿಕಾರಿಗಳು ಕೂಡಲೇ ದಲಿತರನ್ನು ಕರೆದು ಅವರ ಸ್ಥಿತಿಗತಿಗಳ ಬಗ್ಗೆ ವಿಚಾರಿಸದಿದ್ದರೆ ಅವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದ ಎದುರು ಆಮರಣಾಂತ ಉಪಾಸ ಸತ್ಯಾಗ್ರಹ ಮಾಡಲಾಗುವುದು' ಎಂದು ಅವರು ಎಚ್ಚರಿಕೆ ನೀಡಿದರು.

`ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು ದಾಖಲಿಸದೆ ಇರುವ ಬಗ್ಗೆ ಗೃಹ ಇಲಾಖೆಗೆ ದೂರು ನೀಡಲಾಗುವುದು' ಎಂದ ಅವರು, `ಜಿಲ್ಲಾ ಉಸ್ತುವಾರಿ ಸಚಿವರು ಕನಿಷ್ಟಪಕ್ಷ ಮೂರು ತಿಂಗಳಿಗೊಮ್ಮೆ ದಲಿತರ ಸ್ಥಿತಿಗತಿ ಅರಿಯಲು ಇಲ್ಲಾ ಇಲಾಖೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ಚರ್ಚೆ ನಡೆಸಬೇಕು' ಎಂದರು.

`ಅಕ್ರಮ ಸಕ್ರಮ ಯೋಜನೆಯಡಿ ದಲಿತರಿಗೆ ಮನೆ ಮತ್ತು ಕೃಷಿ ಜಮೀನುಗಳನ್ನು ಅರಣ್ಯ ಇಲಾಖೆ ಮೇರೆಗೆ ಪ್ರಕರಣ ಇತ್ಯರ್ಥಗೋಳಿಸಿ ಕೊಡಬೇಕು' ಎಂದು ಆಗ್ರಹಿಸಿದರು.

`ಜಿಲ್ಲೆಯಲ್ಲಿ ಖಾಲಿಯಿರುವ ಬ್ಯಾಕ್‌ಲಾಗ್ ಹುದ್ದೆಗೆ ತಕ್ಷಣ ನೇಮಕ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಡಾ. ವಿ.ಎಸ್.ಸೋಂದೆ ವರದಿಯನ್ನು ಅನುಷ್ಠಾನಕ್ಕೆ ತರಬೇಕು' ಎಂದು ಕಾದ್ರೋಳ್ಳಿ ಒತ್ತಾಯಿಸಿದರು.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ರಾಜೇಶ ದೇಶಭಾಗ, ದಲಿತಪರ ಸಂಘಟನೆಗಳ ಜಿಲ್ಲಾ ಘಟಕದ ಅಧ್ಯಕ್ಷ ದ್ಯಾಮಣ್ಣ ಬೋವಿವಡ್ಡರ, ಉದಯ ಜೊಗಳೇಕರ, ಪಿ.ಟಿ.ಮರಾಠೆ, ಚಂದ್ರಕಾಂತ ರೇವಣಕರ, ಗಣೇಶ ಪಾಠಣಕರ, ದೇವಪ್ಪ ಕಾಸ್ಮಾಡಿ, ಎಚ್.ವೈ. ಭಜಂತ್ರಿ, ಬಸವರಾಜ ದೊಡ್ಮನಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.