ADVERTISEMENT

ದಲೈ ಲಾಮಾಗೆ ಭವ್ಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 7:20 IST
Last Updated 1 ಫೆಬ್ರುವರಿ 2011, 7:20 IST

ಮುಂಡಗೋಡ: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಹಾಗೂ ಟಿಬೇಟಿಯನ್ ಧರ್ಮಗುರು ದಲೈ ಲಾಮಾ ಸೋಮವಾರ ಮುಂಡಗೋಡ ತಾಲ್ಲೂಕಿನ ವಡಗಟ್ಟಾ ಚೆಕ್‌ಪೋಸ್ಟ್ ಬಳಿ ಬೆಳಿಗ್ಗೆ 10.15ಕ್ಕೆ ಆಗಮಿಸಿದಾಗ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ಶಾಸಕ ವಿ.ಎಸ್. ಪಾಟೀಲ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಮೋಹನರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತ, ಶಿರಸಿ ಉಪವಿಭಾಗಾಧಿಕಾರಿ ಜಿ. ಜಗದೀಶ, ಡಿ.ವೈ.ಎಸ್.ಪಿ ಉಲ್ಲಾಸ ವೆರ್ಣೇಕರ, ತಹಸೀಲ್ದಾರ ಎಂ.ವಿ. ಕಲ್ಲೂರಮಠ, ತಾ.ಪಂ. ಕಾ.ನಿ.ಅ. ವಿ.ಆರ್. ಬಸನಗೌಡ್ರ, ಪ.ಪಂ. ಅಧ್ಯಕ್ಷ ಮುನಾಫ ಮಿರ್ಜಾನಕರ, ಉಪಾಧ್ಯಕ್ಷ ವೀರಭದ್ರ ಶೇರಖಾನೆ, ಜಿ.ಪಂ. ಮಾಜಿ ಸದಸ್ಯ ಎಲ್.ಟಿ. ಪಾಟೀಲ, ತುಕಾರಾಮ ಇಂಗಳೆ ದಲೈ ಲಾಮಾ ಅವರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.

ನಂತರ ದಲೈ ಲಾಮಾ ಮುಂಡಗೋಡ ಸಮೀಪದ ಟಿಬೇಟಿಯನ್ ನಿರಾಶ್ರಿತರ ನೆಲೆಗಳಿಗೆ ಪ್ರಯಾಣ ಬೆಳೆಸಿದರು. ಟಿಬೇಟಿಯನ್ ಧರ್ಮಗುರು ನಗರಕ್ಕೆ ಆಗಮಿಸುತ್ತಿದ್ದಂತೆ ಜನರು ರಸ್ತೆಯ ಎರಡೂ ಬದಿಗೆ ನಿಂತುಕೊಂಡು ಅವರನ್ನು ಸ್ವಾಗತಿಸಿದರು. ಟಿಬೇಟಿಯನ್ ಕ್ಯಾಂಪ್ ರಸ್ತೆಯ ಎರಡೂ ಬದಿಗೆ ಬೌದ್ಧ ಭಿಕ್ಕುಗಳು, ಟಿಬೇಟಿಯನ್ನರು ತಮ್ಮ ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಧರ್ಮಗುರುವನ್ನು ಬರಮಾಡಿಕೊಂಡರು.

ಟಿಬೇಟಿಯನ್ ಶಾಲಾ ಮಕ್ಕಳು ವಾದ್ಯ, ಮೇಳದೊಂದಿಗೆ ಗುರುವನ್ನು ಸ್ವಾಗತಿಸಿದರು. ಸುಮಾರು ಐದಾರು ಕಿ.ಮೀ.ವರೆಗೆ ಬೌದ್ಧ ಸನ್ಯಾಸಿಗಳು, ಶಾಲಾ ಮಕ್ಕಳು, ವಿದೇಶಿ ಪ್ರವಾಸಿಗರು, ಬೌದ್ಧ ಅನುಯಾಯಿಗಳು ಸಾಲಿನಲ್ಲಿ ನಿಂತು ಧರ್ಮಗುರುವನ್ನು ಕಂಡು ಪುಳಕಿತಗೊಂಡರು. ನಂತರ ಟಿಬೇಟಿಯನ್ ಧರ್ಮಗುರು ಲಾಮಾ ಕ್ಯಾಂಪ್ ನಂ.2ರಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಥೋ ಬೌದ್ಧ ಮಂದಿರವನ್ನು ಉದ್ಘಾಟಿಸಿದರು.ಫೆ.7ರವರೆಗೆ ದಲೈ ಲಾಮಾ ಕ್ಯಾಂಪಿನ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.