ADVERTISEMENT

ದಿನಕರ ಶೆಟ್ಟಿಗೆ ಟಿಕೆಟ್: ಪರ, ವಿರೋಧ

ಮೋದಿ ವಿರೋಧಿಗೆ ಬಿಜೆಪಿ ಟಿಕೆಟ್: ಆಕಾಂಕ್ಷಿಯಾಗಿದ್ದ ಸೂರಜ ನಾಯ್ಕ ಆರೋಪ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 9:30 IST
Last Updated 21 ಏಪ್ರಿಲ್ 2018, 9:30 IST

ಕುಮಟಾ: ಕುಮಟಾ– ಹೊನ್ನಾವರ ವಿಧಾನಸಭೆಯ ಬಿಜೆಪಿ ಟಿಕೆಟ್‌ಗಾಗಿ ಕೆಲವು ವಾರಗಳಿಂದ ಪಕ್ಷದ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಶುಕ್ರವಾರ ಮೂರನೇ ಪಟ್ಟಿ ಬಿಡುಗಡೆ ಮಾಡಿರುವ ವರಿಷ್ಠರು ದಿನಕರ ಶೆಟ್ಟಿ ಅವರಿಗೆ ಟಿಕೆಟ್ ಘೋಷಿಸಿದ್ದಾರೆ. ಅವರೊಂದಿಗೆ ಮುಖಂಡರಾದ ಸೂರಜ್ ನಾಯ್ಕ ಸೋನಿ, ಉದ್ಯಮಿ ಯಶೋಧರ ನಾಯ್ಕ ಅವರ ಹೆಸರುಗಳು ಅಂತಿಮ ಹಂತದವರೆಗೂ ಪರಿಗಣನೆಯಲ್ಲಿದ್ದವು.

ಪಕ್ಷದ ಟಿಕೆಟ್ ಪಡೆದ ಬಗ್ಗೆ ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡ ದಿನಕರ ಶೆಟ್ಟಿ, ‘ಹಿಂದೆ ದಿವಂಗತ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿ ಪಕ್ಷದಲ್ಲಿದ್ದಾಗ ನಡೆದ ಸಂಸತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಆಗ ಆ ಪಕ್ಷದಿಂದ ನಾವೆಲ್ಲ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಅವರಿಗೆ ಪೂರ್ಣ ಬೆಂಬಲ ನೀಡಿದ್ದೆವು. ಕುಮಟಾ ಪುರಸಭೆಯಲ್ಲಿ ಎರಡು ಬಾರಿ ಬಿಜೆಪಿ ಸದಸ್ಯರು ಅಧ್ಯಕ್ಷರಾಗುವಾಗ ನಮ್ಮ ಪಕ್ಷದ ಸದಸ್ಯರ ಬೆಂಬಲ ನೀಡಿದ್ದರು. ನಾನು ಜೆಡಿಎಸ್‌ನಲ್ಲಿದ್ದರೂ ಹಲವಾರು ಸಂದರ್ಭದಲ್ಲಿ ಬಿ.ಜೆ.ಪಿಗೆ ಬೆಂಬಲ ನೀಡಿದ್ದೇನೆ’ ಎಂದು ಹೇಳಿದರು.

‘ಬಿಜೆಪಿ ತತ್ವ, ಸಿದ್ಧಾಂತಗಳು ಮೆಚ್ಚುಗೆಯಾದ ಕಾರಣದಿಂದಲೇ ಇವೆಲ್ಲ ಸಾಧ್ಯವಾಯಿತು. ಕಳೆದ ಚುನಾವಣೆಯಲ್ಲಿ ನಾನು ಕೇವಲ 420 ಮತಗಳಿಂದ ಸೋತಿದ್ದೇನೆ. ಹಿಂದಿನ ಚುನಾವಣೆಗಳಲ್ಲಿ ಸೋಲುವಾಗ ಗೆಲುವಿನ ಸನಿಹ ಹೋಗಿ ಬಂದಿದ್ದೇನೆ. ಒಮ್ಮೆ ಶಾಸಕನಾಗಿ ಆಯ್ಕೆಯಾಗಿ ಕೆಲಸ ಮಾಡಿ ನನ್ನ ಕಾರ್ಯಪಡೆ, ವರ್ಚಸ್ಸು ಬೆಳೆಸಿಕೊಂಡಿದ್ದೇನೆ. ಟಿಕೆಟ್ ಪಡೆದ ನಂತರ ನನ್ನ ಜವಾಬ್ದಾರಿ ಬೆಟ್ಟದಷ್ಟಿದೆ. ಎಲ್ಲರಿಗೂ ಉತ್ತರ ಕೊಡಲು ಈಗ ಸಮಯವಿಲ್ಲ’ ಎಂದು ತಿಳಿಸಿದರು.

ADVERTISEMENT

‘ದಿನಕರ ಶೆಟ್ಟಿ ಮೋದಿ ವಿರೋಧಿ’: ಜೆಡಿಎಸ್‌ನಿಂದ ಬಿಜೆಪಿಗೆ ಬಂದು ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ದಿನಕರ ಶೆಟ್ಟಿ ಅವರು ಬಿಜೆಪಿ ತತ್ವ–ಸಿದ್ಧಾಂತ ಹಾಗೂ ಮೋದಿ ವಿರೋಧಿಯಾಗಿದ್ದಾರೆ ಎಂದು ಪಕ್ಷದ ಇನ್ನೊಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದ ಸೂರಜ್ ನಾಯ್ಕ ಸೋನಿ ಆರೋಪಿಸಿದ್ದಾರೆ.

ಪಕ್ಷದ ಟಿಕೆಟ್‌ಗಾಗಿ ಕೊನೆಯ ಹಂತದವರೆಗೆ ನಿರಂತರ ಹೋರಾಟ ನಡೆಸಿದ ಅವರು, ‘ಪಕ್ಷದ ಕೆಲವು ಮುಖಂಡರು ನನಗೆ ಟಿಕೆಟ್ ತಪ್ಪಿಸಿ ದಿನಕರ ಶೆಟ್ಟಿ ಅವರಿಗೆ ಕೊಡಿಸುವ ಮೂಲಕ ತಪ್ಪು ಎಸಗಿದ್ದಾರೆ. ಪಕ್ಷದ ಸಿದ್ಧಾಂತ, ತತ್ವ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಸುತ್ತೇನೆ’ ಎಂದು ಹೇಳಿದರು.

‘ಬೇರೆ ಬೇರೆ ಪಕ್ಷಗಳಲ್ಲಿದ್ದಾಗ ಹಲವಾರು ಬಾರಿ ಚುನಾವಣೆಯಲ್ಲಿ ಸೋತ, ಬಿಜೆಪಿ ತತ್ವ, ಸಿದ್ಧಾಂತಗಳನ್ನು ಅವಮಾನಿಸಿದ ದಿನಕರ ಶೆಟ್ಟಿ ಅವರಿಗೆ ಪಕ್ಷ ಮನ್ನಣೆ ನೀಡಿರುವ ಕಾರಣ ಏನು? ಪಕ್ಷದ ಕೆಲವು ಮುಖಂಡರು ಒತ್ತಡಕ್ಕೆ ಮಣಿದು ನನಗೆ ಟಿಕೆಟ್ ತಪ್ಪಿಸಿದ್ದು ಯಾಕೆ ಎನ್ನುವುದನ್ನು ತಿಳಿಸಬೇಕು. ಯುವ ಒಕ್ಕೂಟ, ರಾಜ್ಯ ಕಬಡ್ಡಿ ಸಂಸ್ಥೆಯಲ್ಲಿ ಯುವಕರಿಗಾಗಿ ಕೆಲಸ ಮಾಡಿ ಅವರ ಮನ ಗೆದ್ದಿದ್ದೇನೆ. ಮುಂದಿನ ದಿನಗಳಲ್ಲಿ ನನಗೆ ಅನ್ಯಾಯ ಮಾಡಿರುವ ಪಕ್ಷದ ಮುಖಂಡರ ಹೆಸರನ್ನು ಬಹಿರಂಗಗೊಳಿಸುತ್ತೇನೆ’ ಎಂದು ಆಕ್ರೋಶ ಹೊರಹಾಕಿದರು.

‘ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಯಾರ ಹೆಸರೂ ಸ್ಪಷ್ಟವಾಗಿಲ್ಲ. ಗುರುವಾರ ನನ್ನ ಅಭಿಮಾನಿಗಳು, ಸಂಸ್ಥೆಯ ಕಾರ್ಯಕರ್ತರು ಸೇರಿ ಚರ್ಚೆ ನಡೆಸಿ ಮುಂದಿನ ನಡೆಯ ಬಗ್ಗೆ ಅಭಿಪ್ರಾಯ ನೀಡಿದ್ದಾರೆ. ಟಿಕೆಟ್ ಸಿಗದಿದ್ದರೆ ಮುಂದಿನ ಕ್ರಮದ ಬಗ್ಗೆ ತಿಳಿಸುತ್ತೇನೆ’ ಎಂದು ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಹಾಗೂ ಉದ್ಯಮಿ ಯಶೋಧರ ನಾಯ್ಕ ಗುರುವಾರ ತಿಳಿಸಿದ್ದರು. ಆದರೆ, ಟಿಕೆಟ್ ಪ್ರಕಟವಾದ ನಂತರ ಅವರು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

ಪಕ್ಷೇತರರಾಗಿ ಯಶೋಧರ ನಾಯ್ಕ

ಯಶೋಧರ ನಾಯ್ಕ ಅವರ ಆಪ್ತ ವಲಯದ ವ್ಯಕ್ತಿಯೊಬ್ಬರು ಮಾಹಿತಿ ನೀಡಿ, ‘ಬಿಜೆಪಿ ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಮೊದಲೇ ಅವರು ನಿರ್ಣಯಿಸಿದ್ದರು. ಗುರುವಾರ ತಮ್ಮ ಅಭಿಮಾನಿಗಳು ಹಾಗೂ ಯಶೋಧರ ನಾಯ್ಕ ಟ್ರಸ್ಟ್, ಯಶೋಧರ ನಾಯ್ಕ ಕೋ ಆಪರೇಟಿವ್ ಸೊಸೈಟಿ ಸದಸ್ಯರು, ಪದಾಧಿಕಾರಿಗಳ ಜೊತೆ ಚರ್ಚಿಸದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧಾರ ಕೈಕೊಂಡಿದ್ದಾರೆ. ಏ.23ರಂದು ನಾಮಪತ್ರ ಸಲ್ಲಿಸಲೂ ತೀರ್ಮಾನಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಬಿಜೆಪಿ ಕಚೇರಿ ಬಳಿ ಪೊಲೀಸ್ ಭದ್ರತೆ

ಕುಮಟಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಪ್ರಕಟವಾದ ಬಳಿಕ ಇಲ್ಲಿನ ಬಿಜೆಪಿ ಕಚೇರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪ್ರಬಲ ನಾಮಧಾರಿ ಸಮಾಜದ ಮುಖಂಡ ಹಾಗೂ ಪಕ್ಷದ ಮುಖಂಡ ಸೂರಜ್ ನಾಯ್ಕ ಸೋನಿ ಅವರಿಗೆ ಟಿಕೆಟ್ ಸಿಗುತ್ತದೆ ಎಂದು ಅವರ ಅಭಿಮಾನಿಗಳು, ಬೆಂಬಲಿಗರು ಹೆಚ್ಚಿನ ನಿರೀಕ್ಷೆಯಲ್ಲಿದ್ದರು. ಇದೀಗ ಅವರಿಗೆ ಟಿಕೆಟ್ ಕೈತಪ್ಪಿದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರ ಭದ್ರತೆ ಪಡೆಯಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.