ADVERTISEMENT

ದೇಶದ ಜನಸಂಖ್ಯೆ ಅಮೂಲ್ಯ ಸಂಪನ್ಮೂಲ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 6:45 IST
Last Updated 21 ಸೆಪ್ಟೆಂಬರ್ 2011, 6:45 IST

ಕುಮಟಾ: ದೇಶದ ಜನಸಂಖ್ಯೆಯನ್ನು ಒಂದು ಹೊರೆ ಎಂದು ಭಾವಿಸದೇ ಅದೊಂದು ಅಮೂಲ್ಯ ಮಾನವ ಸಂಪನ್ಮೂಲ ಎಂದು ಭಾವಿಸುವ ಕಾಲ ಇದಾಗಿದೆ ಎಂದು ಪರಿಗಣಿಸುವ ಕಾಲ ಸನ್ನಿಹಿತವಾಗಿದೆ ಎಂದು ನಬಾರ್ಡ್ ಚೀಫ್ ಜನರಲ್ ಮ್ಯಾನೇಜರ್ ಎಸ್.ಎನ್.ಎ. ಜಿನ್ನಾ ತಿಳಿಸಿದರು.

ಕುಮಟಾ ಸಿಂಡಿಕೇಟ್ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ (ಸರ್ಡ್)ಯಲ್ಲಿ ನಬಾರ್ಡ್ ಹಾಗೂ ಸಿಂಡಿಕೇಟ್ ಬ್ಯಾಂಕ್  ಜಂಟಿ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಎಮು ಹಾಗೂ ಕೋಳಿ ಸಾಕಾಣಿಕೆ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

` 2025 ಇಸವಿ ಹೊತ್ತಿಗೆ 25 ರಿಂದ 35 ವರ್ಷ ವಯಸ್ಸಿನ ಭಾರತ ಯುವ ಶಕ್ತಿ ದೇಶದ ಪ್ರಮುಖ ಮಾನವ ಸಂಪನ್ಮೂಲವಾಗಿ ಅಭಿವೃದ್ಧಿಗೆ ಬಳಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಯುವಕರು ಸ್ವ ಉದ್ಯೋಗದ ಮೂಲಕ ತಮ್ಮ ಜೀವನದ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಲು ಮುಂದಾಗಬೇಕು~ ಎಂದರು.

`ಸರ್ಡ್~ ಸಂಸ್ಥೆ ನಿರ್ದೇಶಕ ಚಂದ್ರಶೇಖರ ಅಂಗಡಿ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಹ ನಿರ್ದೇಶಕ ಜಿ.ಎ. ರಾಮಚಂದ್ರ, ಸಿಬ್ಬಂದಿ ಆರ್. ಎಂ. ಶಾನಭಾಗ ಪಾಲ್ಗೊಂಡಿದ್ದರು.

`ಭ್ರೂಣಹತ್ಯೆ ಹೇಯಕರ ಕೃತ್ಯ~
ಅಂಕೋಲಾ: ಭ್ರೂಣಹತ್ಯೆಯು ಕೊಲೆಗಿಂತಲೂ ಹೇಯಕರ ಕೃತ್ಯ~ ಎಂದು ನ್ಯಾಯಾಧೀಶ ಎಸ್.ಬಿ. ದ್ಯಾವಪ್ಪನವರು ಅಭಿಪ್ರಾಯಪಟ್ಟರು.  

 ಅವರು ಈಚೆಗೆ ಸ್ಥಳೀಯ ಜಿ.ಸಿ. ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘಗಳನ್ನು ಜೊತೆಗೆ ಕಾಲೇಜಿನ ಸಹಯೋಗದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಇವುಗಳ ವತಿಯಿಂದ ಏರ್ಪಡಿಸಲಾಗಿದ್ದ ಪರಿಸರ ಸಂರಕ್ಷಣೆ- ಸ್ತ್ರೀ ಭ್ರೂಣಹತ್ಯೆ ತಡೆ ಕಾನೂನಿನ ಕುರಿತಾದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ಸಹಾಯಕ ಸರ್ಕಾರಿ ಅಭಿಯೋಜಕ ಮೋಹನಕುಮಾರ ಬಿ., `ವಿದ್ಯಾರ್ಥಿ ಶಕ್ತಿ ಅಸಾಮಾನ್ಯವಾಗಿದ್ದು, ಯಾವುದೇ ರಚನಾತ್ಮಕ ಹೋರಾಟಗಳ ಯಶಸ್ಸಿನ ಸಿಂಹಪಾಲು ಅವರದಾಗಿರುತ್ತದೆ.  ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘಗಳನ್ನು ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.  

 ಹಿರಿಯ ವಕೀಲ ಎಸ್.ಎಚ್. ನಾಯಕ ಪರಿಸರ ಸಂರಕ್ಷಣೆ ಮತ್ತು ಸ್ತ್ರೀಭ್ರೂಣ ಹತ್ಯೆ ತಡೆ ಕಾನೂನುಗಳ ಕುರಿತು ಉಪನ್ಯಾಸ ನೀಡಿದರು.  ಹೇಮಾ ಮತ್ತು ಸೌಖ್ಯಾ ಪ್ರಾರ್ಥಿಸಿದರು. ವಿ.ಆರ್. ಕಾಮತ ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ಮಧುಕರ ರಾಯ್ಕರ, ಕ್ರೀಡಾ ಸಂಘದ ಉಪಾಧ್ಯಕ್ಷ ಪಿ.ಎಸ್. ಗಾಂವಕರ ಹಾಜರಿದ್ದರು.

ಎಮ್.ಪಿ. ಭಟ್, ವಿ.ಎಸ್. ನಾಯಕ, ಉಮೇಶ ನಾಯ್ಕ, ಗುರು ನಾಯ್ಕ,  ಗಿರಿಯಣ್ಣ ಮಾಸ್ತರ ಮುಂತಾದವರು ಉಪಸ್ಥಿತರಿದ್ದರು.  ಪ್ರೊ.ಎಸ್.ವಿ. ವಸ್ತ್ರದ ನಿರೂಪಿಸಿದರೆ, ಪ್ರೊ.ಎಮ್. ಎಮ್. ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.