ADVERTISEMENT

ಧರ್ಮ ಸಂಕಟದಲ್ಲಿ ವಿದ್ಯಾರ್ಥಿ ಮತದಾರ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 7:10 IST
Last Updated 22 ಏಪ್ರಿಲ್ 2013, 7:10 IST

ಕಾರವಾರ: `ಪಕ್ಷ, ಅಭ್ಯರ್ಥಿ ಯಾರೇ ಇರಲಿ ಮತ ಚಲಾಯಿಸುವುದು ನಮ್ಮ ಕರ್ತವ್ಯ' ಇದು ನಗರದ ವಿವಿಧ ಸರ್ಕಾರಿ ಪಾಲಿಟೆಕ್ನಿಕ್, ಪ್ರಥಮ ದರ್ಜೆ ಐಟಿಐ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ದೃಢ ನಿಲುವು.

ಹೀಗೆ ಮತ ಚಲಾಯಿಸಬೇಕು ದೃಢಸಂಕಲ್ಪ ಹೊಂದಿರುವ ನಗರದ ವಿವಿಧ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆ ನಡೆಯುತ್ತಿರುವುದರಿಂದ ಮತ ಚಲಾಯಿಸಲು ಊರಿಗೆ ಹೋಗಬೇಕೋ ಬೇಡವೋ ಎನ್ನುವ ಧರ್ಮ ಸಂಕಟಕ್ಕೆ ಸಿಲುಕಿದ್ದಾರೆ.

ಪದವಿ ಪರೀಕ್ಷೆಗಳು ಈಗಾಗಲೇ ಆರಂಭವಾಗಿದ್ದರೆ, ಪಾಲಿಟೆಕ್ನಿಕ್ ಪರೀಕ್ಷೆಗಳು ಇದೇ 29ರಿಂದ ಪ್ರಾರಂಭವಾಗಲಿದೆ. ಉನ್ನತ ವ್ಯಾಸಂಗದ ಕನಸು ಹೊತ್ತುಕೊಂಡಿರುವ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಗಂಭೀರವಾದ ಅಧ್ಯಯನದಲ್ಲಿ ತೊಡಗಿದ್ದಾರೆ.

ವಸತಿ ನಿಲಯದಲ್ಲಿರುವ ಬಹುತೇಕ ವಿದ್ಯಾರ್ಥಿಗಳು ಶಿರಸಿ, ಕುಮಟಾ, ಸಿದ್ದಾಪುರ, ಭಟ್ಕಳ, ಹೊನ್ನಾವರ, ಯಲ್ಲಾಪುರ ತಾಲ್ಲೂಕಿನವರು. ಮತದಾನದಲ್ಲಿ ಪಾಲ್ಗೊಳ್ಳಲು ಊರಿಗೆ ಹೋಗಬೇಕೆಂದರೆ ್ಙ 500ರಿಂದ 600 ಖರ್ಚು ಹಿಡಿಯುತ್ತದೆ. ಇದೂ ಅಲ್ಲದೆ ಊರಿಗೆ ಹೊರಟರೆ ಓದಿಗೆ ವಿರಾಮ ಕೊಡಲೇಬೇಕು ಹೀಗಾಗಿ ವಿದ್ಯಾರ್ಥಿಗಳು ಉಭಯ ಸಂಕಟಕ್ಕೆ ಸಿಲುಕಿದ್ದಾರೆ.

ಚುನಾವಣೆ ದಿನಾಂಕ ಘೋಷಣೆ ಆಗುವುದಕ್ಕಿಂತ ಮೊದಲು ಪರೀಕ್ಷೆಗಳ ದಿನಾಂಕ ನಿಗದಿಯಾಗಿತ್ತು. ಮತದಾನದ ದಿನಾಂಕ ಪ್ರಕಟವಾದ ಇದೇ ಅವಧಿಯಲ್ಲಿದ್ದ ಕೆಲ ವಿಷಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆದರೆ, ಮುಂದೂಡಿರುವ ಅವಧಿ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು ಮತದಾನಕ್ಕೆ ಹೋಗಬೇಕೋ ಬೇಡವೋ ಎನ್ನುವ ಚಿಂತೆಯಲ್ಲಿದ್ದಾರೆ.

ಹಬ್ಬುವಾಡದಲ್ಲಿರುವ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿರುವ ಅಂಕೋಲಾ, ಕುಮಟಾ, ಹೊನ್ನಾವರ, ಶಿರಸಿ, ಸಿದ್ದಾಪುರದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೊದಲ ಬಾರಿಯ ಮತದಾನದ ಹಕ್ಕನ್ನು ಚಲಾಯಿಸಲು ಕಾತರರಾಗಿದ್ದಾರೆ.  ಆದರೆ, ಪರೀಕ್ಷೆ  ಬಂದಿರುವುದು ಅವರ ಆಸೆಗೆ ತಣ್ಣೀರೆರಚಿದೆ.

`ಪರೀಕ್ಷೆ ವೇಳಾಪಟ್ಟಿ ಮೊದಲೇ ನಿಗದಿಯಾಗಿತ್ತು. ಇದೇ ಸಮಯದಲ್ಲಿ ಚುನಾವಣೆ ದಿನಾಂಕವೂ ನಿಗದಿಯಾಗಿದ್ದರಿಂದ ನಾವು ಉಭಯ ಸಂಕಟಕ್ಕೆ ಸಿಲುಕಿದ್ದೇವೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಸಂಬಂಧಪಟ್ಟವರು ನೋಡಿಕೊಳ್ಳಬೇಕು' ಎನ್ನುತ್ತಾರೆ ವಿದ್ಯಾರ್ಥಿಗಳು.

`ಪರೀಕ್ಷೆ ವೇಳೆಯಲ್ಲಿ ಚುನಾವಣೆ ಇರುವುದರಿಂದ ಅಭ್ಯರ್ಥಿಗಳು ಪ್ರಚಾರಕ್ಕೆ ಅತ್ತಿಂದಿತ್ತ ಓಡಾಡುತ್ತಿರುವುದರಿಂದ ನಮ್ಮ ಗಮನ ಆ ಕಡೆ ಹೋಗುತ್ತಿದೆ. ಚುನಾವಣೆ ನಮ್ಮ ಅಧ್ಯಯನದ ಮೇಲೆ ಪರಿಣಾಮ ಬೀರಿದೆ' ಎನ್ನುತ್ತಾರೆ ವಿದ್ಯಾರ್ಥಿ ಪ್ರಶಾಂತ ನಾಯ್ಕ.

ಪರಿಸ್ಥಿತಿಯ ಒತ್ತಡದ ಮಧ್ಯೆಯೂ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳ ಪೈಕಿ ರಾಘವೇಂದ್ರ ನಾಯ್ಕ, ಅಣ್ಣಪ್ಪ ನಾಯ್ಕ, ರಾಜು ನಾಯ್ಕ, ಸಿಂದುರಾಜ್, ಈಶ್ವರ ನಾಯ್ಕ, ಮಲ್ಲಿಕಾರ್ಜುನ ನಾಯ್ಕ ಮತದಾನದಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.