ADVERTISEMENT

ಧರ್ಮ ಸಂಸ್ಥಾಪನೆ ಮಠಗಳ ಕರ್ತವ್ಯ: ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 8:37 IST
Last Updated 27 ನವೆಂಬರ್ 2017, 8:37 IST

ಭಟ್ಕಳ: ‘ಧರ್ಮ ಸಂಸ್ಥಾಪನೆ ಮಾಡುವುದೇ ಗುರುಗಳ ಹಾಗೂ ಮಠಗಳ ಕರ್ತವ್ಯ’ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾನುಷ್ಠಾನ ಸಚಿವ ಸದಾನಂದ ಗೌಡ ಹೇಳಿದರು. ಉತ್ತರಭಾರತದ ಹರಿದ್ವಾರದಲ್ಲಿ ಉಜಿರೆಯ ಶ್ರೀರಾಮ ಕ್ಷೇತ್ರದ ವತಿಯಿಂದ ನಿರ್ಮಾಣಗೊಂಡಿರುವ ನೂತನ ‘ಸಾಧನಾ ಕುಟೀರ’ವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಧರ್ಮ ಸಂಸತ್ ದಕ್ಷಿಣ ಭಾರತದಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆದರೆ, ಉತ್ತರ ಭಾರತದಲ್ಲಿ ಹರಿದ್ವಾರದ ಸಾಧನಾ ಕುಟೀರದಲ್ಲಿ ನಡೆಯುತ್ತಿದೆ. ಒಂದು ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರ, ಪ್ರೀತಿ, ವಿಶ್ವಾಸ, ಗುರುಗಳ ಮಾರ್ಗದರ್ಶನ ಇದ್ದಾಗ ಮಾತ್ರ ಎಲರಲವೂ ಯಶಸ್ವಿಯಾಗಲು ಸಾಧ್ಯ’ ಎಂದರು.

ಶಾಸಕ ಮಂಕಾಳ ವೈದ್ಯ ಮಾತನಾಡಿ, ‘ಶ್ರೀರಾಮಕ್ಷೇತ್ರದಿಂದಾಗಿ ಅತ್ಯಂತ ಕೆಳವರ್ಗದ ಬಡ ಮಕ್ಕಳೂ ಸಹ ಶಿಕ್ಷಣ ಪಡೆಯುವಂತಾಯಿತು. ಇದಕ್ಕೆ ಮೂಲ ಕಾರಣ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು. ಅವರ ಎಲ್ಲ ಕಾರ್ಯಕ್ಕೆ ನನ್ನ ಸಹಾಯ, ಸಹಕಾರ ಯಾವತ್ತೂ ಇರುತ್ತದೆ’ ಎಂದರು.

ADVERTISEMENT

ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ‘ಇತ್ತೀಚಿಗೆ ಮನುಷ್ಯನಲ್ಲಿ ಚಂಚಲತೆ, ಅಹಂಕಾರ ಹೆಚ್ಚುತ್ತಿದೆ. ಅವೆಲ್ಲವನ್ನೂ ಬಿಟ್ಟು ಬಂದಾಗ ಮಾತ್ರ ಭಗವಂತ ರಕ್ಷಿಸುತ್ತಾನೆ. ಎಲ್ಲವೂ ಆತನ ಇಚ್ಛೆಯಂತೆ ನಡೆಯುತ್ತಿದೆ’ ಎಂದರು. ಹರಿದ್ವಾರದ ಪ್ರೇಮಾನಂದಜಿ ಮಹಾರಾಜ ಸ್ವಾಮೀಜಿ, ದೇವಾನಂದ ಸರಸ್ವತಿ ಸ್ವಾಮೀಜಿ, ಸೋಮೇಶ್ವರನಂದಜೀ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಆರಂಭದಲ್ಲಿ ದೆಹಲಿಯ ಶ್ರೀರಾಮ ನಿರ್ಧಯ ಭಗವತಿ ನಿಕೇತನ ತಂಡವರಿಂದ ಶ್ರೀರಾಮ ಕೀರ್ತನೆ ನಡೆಯಿತು. ಕಾಸ್ಕಾರ್ಡ್‌ ಬ್ಯಾಂಕ್‌ನ ಉಪಾಧ್ಯಕ್ಷ ಈಶ್ವರ ನಾಯ್ಕ, ಭಟ್ಕಳ ಶ್ರೀರಾಮ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಸೇರಿದಂತೆ ಶ್ರೀಕ್ಷೇತ್ರಕ್ಕೆ ವಿಶೇಷ ಸೇವೆ ಸಲ್ಲಿಸಿದ ಹಲವು ಗಣ್ಯರನ್ನು ಶ್ರೀರಾಮಕ್ಷೇತ್ರದ ಪರವಾಗಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸನ್ಮಾನಿಸಿದರು.

ಶಶಿಕಾಂತ ದಿಂಗಬರ ಸ್ವಾಗತಿಸಿದರು. ಗೌರಿಶಂಕರ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ರಾಜ್ಯ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ, ಹರಿದ್ವಾರದ ಮೇಯರ್ ಮನೋಜ ಗರ್ಗ್‌, ಆಶೀಶ್ ಗೌತಮ್, ಪೀತಾಂಬರ ಹರಾಜೆ, ಉದ್ಯಮಿ ಸದಾನಂದ ಬಂಗೇರ, ಭಗವತಿ ಪ್ರಸಾದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.