ADVERTISEMENT

ನಂಜು ಕಾರುವುದನ್ನು ನಾಯಕ ಬಿಡಲಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 8:50 IST
Last Updated 19 ಏಪ್ರಿಲ್ 2012, 8:50 IST

ಕಾರವಾರ: `ಜಿಲ್ಲಾ ಸಾಹಿತ್ಯ ಪರಿಷತ್ ಘಟಕವನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದು ಹಿರಿಯ ಸಾಹಿತಿಗಳು, ಹಿತೈಷಿಗಳು ನೀವೇ ಈ ಬಾರಿ ಸರ್ಧಿಸಬೇಕು ಎಂದು ಒತ್ತಾಯ ಮಾಡಿದ್ದರಿಂದ ಸ್ಪರ್ಧಿಸುವ ನಿರ್ಧಾರ ಕೈಗೊಂಡು ಕಣಕ್ಕಿಳಿದ್ದಿದ್ದೇನೆ ಹೊರತು ನಾನೇ ಮುಂದುವರಿಯಬೇಕು ಎನ್ನುವ ದೃಷ್ಟಿಯಿಂದಲ್ಲ~ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ರೋಹಿದಾಸ ನಾಯಕ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಬೇಕೇ ಎಂದಿದ್ದರೆ ಮಾಸ್ಕೇರಿ ಎಮ್.ಕೆ.ನಾಯಕ ಅವರು ನನ್ನ ಜೊತೆ ನೆರವಾಗಿ ಬಂದು ಮಾತನಾಡಬಹುದಿತ್ತು. ಮಾಧ್ಯಮಗಳ ಮೂಲಕ ಹೇಳಿಕೆ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದರು.

`ಅವರೇ ಸ್ಪರ್ಧೆಗೆ ನಿಂತು ನನ್ನ ಬಳಿ ಮನವಿ ಮಾಡಿಕೊಂಡಿದ್ದರೆ ವಿಚಾರ ಮಾಡಬಹುದಿತ್ತು. ಏನನ್ನೂ ಹೇಳದೆ ಮಾಧ್ಯಮಗಳ ಮೂಲಕ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೇಳಿಕೆಗಳನ್ನು ಕೊಡುವುದು ಬಹಳ ಸುಲಭದ ಕೆಲಸ ಸಾಹಿತ್ಯ ಪರಿಷತ್ ನಮ್ಮಪ್ಪನ ಮನೆ ಆಸ್ತಿಯಲ್ಲ. ಆಜೀವ ಸದಸ್ಯರೆಲ್ಲರೂ ಸ್ಪರ್ಧಿಸಬಹುದು~ ಎಂದು ನಾಯಕ ನುಡಿದರು.

`ಅವಿರೋಧ ಸಂಸ್ಕೃತಿ ಎಂದರೆ ಏನು ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಹೀಗೆ ಹೇಳಿಕೆ ನೀಡುವವರು ಮತದಾರರನ್ನು ಗುತ್ತಿಗೆ ಪಡೆದಿಲ್ಲ. ಅವಿರೋಧ ಆಯ್ಕೆ ಮಾಡಬೇಕು ಎನ್ನುವರು ಒಬ್ಬರ ಪರವಾಗಿ ಮಾತನಾಡುವುದೇಕೇ ಎಂದು ಪ್ರಶ್ನಿಸಿದ ಅವರು, ಮಾಸ್ಕೇರಿ ನಾಯಕರು ಈ ರೀತಿ ನಂಜು ಕಾರುವುದನ್ನು ಬಿಡಬೇಕು~ ಎಂದರು.

ತಮ್ಮ ಸಂಬಂಧಿ ಅರವಿಂದ ಕರ್ಕಿಕೋಡಿ ಅವರನ್ನು ನಿಲ್ಲಿಸಿ ನಾಟಕ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಅಲ್ಲಗಳೆದ ಅವರು `ಕರ್ಕಿಕೋಡಿ ನನ್ನ ಸಂಬಂಧಿಯಾಗಿರಬಹುದು. ಈಗ ಅವರು ಒಬ್ಬ ಪ್ರತಿಸ್ಪರ್ಧಿ. ನಾಲ್ಕೂ ಜನ ಸ್ಪರ್ಧಿಗಳಲ್ಲಿ ಎಲ್ಲರಿಗೂ ಅರ್ಹತೆ ಇದೆ. ಸೂಕ್ತರನ್ನು ಆಯ್ಕೆ ಮಾಡುವುದು ಪರಿಷತ್‌ನ ಆಜೀವ ಸದಸ್ಯರ ಜವಾಬ್ದಾರಿ~ ಎಂದು ನಾಯಕ ನುಡಿದರು.

`ಸಾಹಿತ್ಯ ಪರಿಷತ್ ಘಟಕ ಪಿಂಚಣಿದಾರರ ಕೇಂದ್ರ ಆಗಲಿದೆ ಎನ್ನುವ ಅನುಮಾನವನ್ನು ಕರ್ಕಿಕೋಡಿ ವ್ಯಕ್ತಪಡಿಸಿದ್ದಾರೆ. ಸ್ಪರ್ಧೆಗೆ ಇಳಿದವರಲ್ಲಿ ಮೂರು ಜನ ಪಿಂಚಣಿದಾರರು ಹೌದು. ಪರಿಷತ್ತಿಗೆ ಯುವಕರ ಸೇವೆ ಬೇಕು ಎನ್ನುವುದಕ್ಕಿಂತ ಪ್ರಬುದ್ಧರಿರಬೇಕು ಎನ್ನುವುದು ಮುಖ್ಯ. ಇದು ಸೇವಾ ಕ್ಷೇತ್ರ.  ಹಣ ಮಾಡುವ ಉದ್ದೇಶ ಇರಬಾರದು. ಇದು ರಾಜಕೀಯ ಕ್ಷೇತ್ರವಲ್ಲ~ ಎಂದು ಅವರು ನುಡಿದರು.

`ಸ್ಪರ್ಧೆಗೆ ಇಳಿದಿರುವ ಸಾಹಿತಿಗಳು ಕನ್ನಡ ದ್ರೋಹಿಗಳು, ಅವರಿಗೆ ಕವನ ಓದಲು ಬರುವುದಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಇಂತಹ ಅರ್ಥಹೀನ ವ್ಯಾಖ್ಯಾನ ಕೊಡಬಾರದು. ಡಾ. ಝಮೀರುಲ್ಲಾ ಷರೀಫ್ ನನ್ನ ಪ್ರತಿಸ್ಪರ್ಧಿ ಆಗಿರಬಹುದು ಆದರೆ ಅವರೊಬ್ಬ ಉತ್ತಮ ಕವಿ. ವಿದೇಶಗಳಲ್ಲಿ ನಡೆದ ಕವಿಗೋಷ್ಠಿಯಲ್ಲಿ ಅಧ್ಯಕ್ಷನಾಗಿ ನಾನು ಪಾಲ್ಗೊಂಡಿದ್ದೇನೆ. ಹಿರಿಯ ಸಾಹಿತಿಗಳ ಕುರಿತು ಈ ರೀತಿಯ ಟೀಕೆಗಳನ್ನು ಮಾಡಬಾರದು~ ಎಂದು ಅವರು ಹೇಳಿದರು.

`ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ನನ್ನ ಅನುಭವದ ಪ್ರಕಾರ ಸುಲಭದ ಕೆಲಸವಲ್ಲ. ಸಮ್ಮೇಳನಕ್ಕೆ ಒಂದರಿಂದ ಎರಡು ಲಕ್ಷ ಜನ ಬರುತ್ತಾರೆ. 5ರಿಂದ 6 ಸಾವಿರ ಸಾಹಿತಿಗಳು ಬರುತ್ತಾರೆ. ದೊಡ್ಡ ಸ್ಥಳಾವಕಾಶ ಬೇಕು. ಮೂಲಭೂತ ಸೌಲಭ್ಯ, ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡಬೇಕು. ಅದೊಂದು ಸವಾಲಿನ ಕೆಲಸ. ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ದೇಣಿಗೆ ನೀಡುವವರೂ ಇಲ್ಲ. ಸಮ್ಮೇಳನ ಸಂಘಟಿಸಿದರೆ ಬಂದವರಿಗೆಲ್ಲ ಅದು ನೆನಪಿನಲ್ಲಿ ಉಳಿಯಬೇಕು. ಕಾಟಾಚಾರಕ್ಕೆ ಮಾಡಬಾರದು ಎನ್ನುವುದೇ ನನ್ನ ಉದ್ದೇಶವಾಗಿತ್ತು. ಈ ದೃಷ್ಠಿಯಿಂದ ಸಮ್ಮೇಳನ ಸಂಘಟಿಸುವ ಪ್ರಯತ್ನ ಮಾಡಲಿಲ್ಲ~ ಎಂದರು.

ಗಂಗಾಧರ ಶಾಸ್ತ್ರಿ ನಾಜಗಾರ, ಸಾಹಿತ್ಯ ಪರಿಷತ್‌ಗೆ ಸರ್ಕಾರ ಅನುದಾನ ನೀಡುತ್ತಿದೆ. ಈ ಅನುದಾನವನ್ನು ವ್ಯವಸ್ಥಿತವಾಗಿ ಬಳಸಬೇಕು. ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ತಂದು ಪ್ರಯೋಗ ಮಾಡುವುದಕ್ಕಿಂತ ಅಧ್ಯಕ್ಷ ಸ್ಥಾನಕ್ಕೆ ನೀವೇ ಸ್ಪರ್ಧಿಸಬೇಕು ಎಂದು ಹಿರಿಯ ಸಾಹಿತಿಗಳೆಲ್ಲರೂ ಒತ್ತಾಯ ಮಾಡಿದ್ದೇವು ಎಂದರು. ಸಾಹಿತಿ ಕುಟ್ಟು ಕುಲಕರ್ಣಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ, ಕುಮಟಾ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಆರ್.ಗಜು ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.