ADVERTISEMENT

ನಸುಕಿನಲ್ಲೇ ಜಾತ್ರೆ ಪೇಟೆ ಸ್ವಚ್ಛ

ಪೌರಕಾರ್ಮಿಕರಿಂದ ನೈರ್ಮಲ್ಯ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 7:14 IST
Last Updated 18 ಮಾರ್ಚ್ 2014, 7:14 IST

ಶಿರಸಿ: ಕತ್ತಲೆಯ ಪರದೆ ಆವರಿಸಿ ವಿದ್ಯುತ್‌ ದೀಪ ಝಗಮಗಿಸುತ್ತಿದ್ದಂತೆ ಜಾತ್ರೆ ಪೇಟೆಯೆಡೆಗೆ ಜನರು ಸಹಸ್ರ ಸಂಖ್ಯೆಯಲ್ಲಿ ದಾಪುಗಾಲಿಡುತ್ತಾರೆ. ನಡುರಾತ್ರಿವರೆಗೂ ಪೇಟೆ ಸಂಚಾರ ಮಾಡಿ ಜನರು ಮನೆ ಕಡೆ ಹೆಜ್ಜೆ ಹಾಕಿ ದಾಗ ಅಂಗಡಿ ಮುಂಗಟ್ಟು ಮುಚ್ಚಿ ಕೊಳ್ಳುತ್ತವೆ. ಇಡೀ ನಗರ ಬೆಳಗಿನ ಜಾವದ ಸವಿ ನಿದ್ದೆಯಲ್ಲಿರುವಾಗ ಮಾರಿ ಚಪ್ಪರದ ಸುತ್ತಲೂ ಚಟುವಟಿಕೆಯಲ್ಲಿ ನಿರತರಾಗಿರುವವರು ನಗರಸಭೆಯ ಪೌರಕಾರ್ಮಿಕರು.

ಬೆಳಗಿನ ಜಾವ 2ರಿಂದ 3 ಗಂಟೆಯ ಅವಧಿಯಲ್ಲಿ ಜಾತ್ರೆ ಪೇಟೆಗೆ ಬರುವ 70ಕ್ಕೂ ಅಧಿಕ ಮಂದಿ ಪೌರಕಾರ್ಮಿ ಕರು ನಿರಂತರ ಏಳು ತಾಸು ಕೆಲಸ ನಿರ್ವಹಿಸಿ ಸಂಗ್ರಹಗೊಂಡಿರುವ ತ್ಯಾಜ್ಯ ಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತಾರೆ. ಪ್ರತಿದಿನ 10ಸಾವಿರಕ್ಕೂ ಅಧಿಕ ಜನರು ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಆಸೀನಳಾಗಿರುವ ಮಾರಿಕಾಂಬಾ ದೇವಿಯ ದರ್ಶನ ಪಡೆಯಲು ಆಗಮಿಸುತ್ತಾರೆ. ಗದ್ದುಗೆ  ಸುತ್ತ ಹರಡಿಕೊಂಡಿರುವ ಬಳೆ ಪೇಟೆ, ತಿಂಡಿ–ತಿನಿಸು ಅಂಗಡಿ, ಮನರಂಜನಾ ಚಟುವಟಿಕೆ ವೀಕ್ಷಿಸಲು ಸ್ಥಳೀಯರು ಸಂಜೆ ವೇಳೆ ಜಾತ್ರೆ ಪೇಟೆಗೆ ತೆರಳುತ್ತಾರೆ. ಹಗಲು–ರಾತ್ರಿ ಜನಜಂಗುಳಿಯಿಂದ ತುಂಬಿರುವ ಜಾತ್ರೆ ಪೇಟೆಯಲ್ಲಿ ಪ್ರತಿದಿನ 25–30 ಟನ್‌ಗಿಂತ ಹೆಚ್ಚು ತ್ಯಾಜ್ಯ ಸಂಗ್ರಹವಾಗುತ್ತದೆ.

ನಗರಸಭೆ ಆರು ಸೀಟಿನ ಸಂಚಾರಿ ಶೌಚಾಲಯ, 12 ತಾತ್ಕಾಲಿಕ ಶೌಚಾಲಯ, 2 ಮಹಿಳಾ ಮೂತ್ರಾ ಲಯ ವ್ಯವಸ್ಥೆಗೊಳಿಸಿದ್ದರೂ ಕೆಲವರು ಪೇಟೆಯ ಸುತ್ತಲಿನ ಖಾಲಿ ಜಾಗವನ್ನು ಮಲೀನಗೊಳಿಸಿ ಹೋಗುತ್ತಾರೆ. ಇವ ನ್ನೆಲ್ಲ ಸ್ವಚ್ಛಗೊಳಿಸಿ ಜಾತ್ರೆಗೆ ಬರುವ ಜನರಿಗೆ ಗಬ್ಬು ವಾಸನೆಯ ಅನುಭವ ಆಗದಂತೆ ಜಾತ್ರೆ ಪೇಟೆಯಲ್ಲಿ ಶುಚಿತ್ವ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವ ಹಿಸುತ್ತಿರುವವರು ಪೌರಕಾರ್ಮಿಕರು.

‘ಪೌರಕಾರ್ಮಿಕರು ದಿನವೂ ಎಲ್ಲ ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಅಲ್ಲಿ ನೀರಿನ ಸಮರ್ಪಕ ಪೂರೈಕೆಯ  ಜವಾಬ್ದಾರಿ ನೋಡಿಕೊಳ್ಳುತ್ತಾರೆ. ರಸ್ತೆ ಬದಿ ಮಲ ವಿಸರ್ಜನೆಗೆ ಅವಕಾಶ ಆಗದಂತೆ ನಿಗಾ ವಹಿಸಲಾಗಿದೆ’ ಎನ್ನುತ್ತಾರೆ ಆರೋಗ್ಯ ನಿರೀಕ್ಷಕ ಆರ್‌.ಎಂ. ವೆರ್ಣೇಕರ.

ಜೆಸಿಬಿ ಯಂತ್ರದ ಸಹಾಯದಿಂದ ಮೂರು ಟ್ರ್ಯಾಕ್ಟರ್‌ಗಳಲ್ಲಿ ಕಸಗಳನ್ನು ತುಂಬಿ ನಗರದ ಹೊರವಲಯದಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಇಲ್ಲಿನ ಕಸಗಳನ್ನು ಸಾಗಿಸಲಾಗುತ್ತಿದೆ. ದೂಳು ಉಂಟಾಗದಂತೆ ರಸ್ತೆಯ ಮೇಲೆ ನೀರು ಸಿಂಪಡಣೆ, ಚರಂಡಿ ಇನ್ನಿತರ ಕಡೆಗಳಲ್ಲಿ ಬ್ಲೀಚಿಂಗ್‌ ಪೌಡರ್‌ ಸಿಂಪಡಣೆ ಸಹ ಮಾಡಲಾಗುತ್ತಿದೆ.

ನಗರಸಭೆ ವತಿಯಿಂದ ಮಾರಿಕಾಂಬಾ ದೇವಾಲಯದ ಉಚಿತ ಅನ್ನ ಸಂತರ್ಪಣೆಗೆ ಪ್ರತಿ ದಿನ 2 ಟ್ಯಾಂಕರ್‌ ನೀರು, ಜಾತ್ರಾ ಗದ್ದುಗೆಯ ಸಮೀಪ ಅಳವಡಿಸಿರುವ ಏಳು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ, ಸ್ವಚ್ಛತಾ ಕಾರ್ಯಕ್ಕೆ ಮೂರು ಟ್ಯಾಂಕ್‌ ನೀರು ಪೂರೈಕೆಯಾಗುತ್ತಿದೆ. ನಗರಸಭೆ ವ್ಯವಸ್ಥೆಗೊಳಿಸಿರುವ ರಾಜೀವ ನಗರ ಹಾಗೂ ಶಂಕರ ಹೊಂಡ ಸಮೀಪದ ಪಾರ್ಕಿಂಗ್‌ ಸ್ಥಳಗಳಲ್ಲೂ ದೂಳಿನ ವಾತಾವರಣ ಉಂಟಾಗದಂತೆ ರಸ್ತೆಯ ಮೇಲೆ ನೀರು ಸಿಂಪಡಣೆ ಕೈಗೊಳ್ಳಲಾಗುತ್ತಿದೆ.

ಇದರಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರೂ ಜಾತ್ರಾ ಗದ್ದುಗೆ ಆವರಣದಲ್ಲಿ ನೈರ್ಮಲ್ಯ ನಿರ್ವಹಣೆಯಾಗಿದೆ. ಇಲ್ಲವಾದಲ್ಲಿ ಲಕ್ಷಾಂತರ ಜನರು ಆಗಮಿಸುವ ಜಾತ್ರೆಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗುತ್ತಿತ್ತು. ಪೌರ ಕಾರ್ಮಿಕರ ಕಾರ್ಯನಿರ್ವಹಣೆಗೆ ಪ್ರಶಂಸೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.