ADVERTISEMENT

ನಿತ್ರಾಣ ಬ್ರಿಡಲ್ಡ್ ಟರ್ನ್ ಹಕ್ಕಿಗೆ ಆರೈಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2011, 5:30 IST
Last Updated 25 ಜೂನ್ 2011, 5:30 IST
ನಿತ್ರಾಣ ಬ್ರಿಡಲ್ಡ್ ಟರ್ನ್ ಹಕ್ಕಿಗೆ ಆರೈಕೆ
ನಿತ್ರಾಣ ಬ್ರಿಡಲ್ಡ್ ಟರ್ನ್ ಹಕ್ಕಿಗೆ ಆರೈಕೆ   

ಶಿರಸಿ: ಸಾಮಾನ್ಯವಾಗಿ ಸಮುದ್ರ ತಟದಲ್ಲಿ ಕಂಡು ಬರುವ ಬ್ರಿಡಲ್ಡ್ ಟರ್ನ್ ಎಂಬ ಹಕ್ಕಿ ಹಾರಲು ಸಾಧ್ಯವಾಗದ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಸ್ತೆ ಬದಿಯಲ್ಲಿ ಅಸಹಾಯಕವಾಗಿ ಬಿದ್ದಿದ್ದ ಹಕ್ಕಿಯನ್ನು ಶಾಲಾ ಬಾಲಕನೊಬ್ಬ ತಂದು ಮನೆಯಲ್ಲಿ ಆರೈಕೆ ಮಾಡುತ್ತಿದ್ದಾನೆ.

ಕೆಲ ದಿನಗಳ ಹಿಂದಷ್ಟೇ ಗಾಯಗೊಂಡ ಸ್ಥಿತಿಯಲ್ಲಿದ್ದ ಇದೇ ಜಾತಿಯ ಇನ್ನೊಂದು ಹಕ್ಕಿ ಇಲ್ಲಿನ ಅರಣ್ಯ ಕಾಲೇಜಿನ ಸಮೀಪ ದೊರೆತಿತ್ತು. 15 ದಿನಗಳ ಅಂತರದಲ್ಲಿ ಮತ್ತೊಂದು ಬ್ರಿಡಲ್ಡ್ ಟರ್ನ್ ಗಾಯಗೊಂಡ ಸ್ಥಿತಿಯಲ್ಲೇ ಕಂಡು ಬಂದಿರುವುದು ನಗರದ ಜನತೆಯಲ್ಲಿ ಅಚ್ಚರಿ ಮೂಡಿಸಿದೆ.

ಲಯನ್ಸ್ ಶಾಲೆಯ ಬಾಲಕ ಪ್ರಣವ ಹೆಗಡೆ ದಾರಿಯಲ್ಲಿ ಹೋಗುತ್ತಿರುವಾಗ ನಿತ್ರಾಣವಾಗಿ ರಸ್ತೆ ಬದಿಯಲ್ಲಿ ಬಿದ್ದುಕೊಂಡಿದ್ದ ಹಕ್ಕಿಯನ್ನು ಮನೆಗೆ ತಂದು ಅದಕ್ಕೆ ಆಹಾರ ನೀಡಿ ಸಲಹುತ್ತಿದ್ದಾನೆ.

ಮಹಾರಾಷ್ಟ್ರ, ಲಕ್ಷದ್ವೀಪ, ಶ್ರೀಲಂಕಾ, ಪಾಕಿಸ್ತಾನದ ಕಡಲ ತೀರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಬ್ರಿಡಲ್ಡ್ ಟರ್ನ್ ಹಕ್ಕಿ ಸಮುದ್ರದ ಮೇಲೆ ಹಾರಾಡುತ್ತ ಮೀನನ್ನು ತಿಂದು ಜೀವಿಸುತ್ತದೆ. ಲಾರಿಡೆ ಕುಟುಂಬಕ್ಕೆ ಸೇರಿದ ಈ ಹಕ್ಕಿ ಸಮುದ್ರದ ನಡುಗಡ್ಡೆಯಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ ಎಂದು ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಶ್ರೀಧರ ಭಟ್ಟ ಹೇಳುತ್ತಾರೆ.

ವಲಸೆ ಹಕ್ಕಿಗಳು ದಾರಿ ತಪ್ಪಿ ಈ ಭಾಗಕ್ಕೆ ಬಂದು, ವಾಪಸ್ ತೆರಳಲು ಸಾಧ್ಯವಾಗದೆ ಹೀಗಾಗಿರಬಹುದು ಎಂದೂ ಹೇಳುವರು.

ಕಡಲ ತೀರದಲ್ಲಿ ಬದುಕುವ ಹಕ್ಕಿ ಘಟ್ಟದ ಮೇಲಿನ ಪ್ರದೇಶಕ್ಕೆ ಹೇಗೆ ಬಂತು, ಒಂದು ತಿಂಗಳ ಅವಧಿಯಲ್ಲಿ ಇದೇ ಜಾತಿಯ ಎರಡು ಹಕ್ಕಿಗಳು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವದು ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.