ADVERTISEMENT

ನಿರಂತರ ಮಳೆ: ಗದ್ದೆ, ಕೊಟ್ಟಿಗೆಗೆ ಹಾನಿ; ಕಾರು ಜಖಂ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 7:14 IST
Last Updated 22 ಜುಲೈ 2013, 7:14 IST

ಶಿರಸಿ: ತಾಲ್ಲೂಕಿನಲ್ಲಿ ನಾಲ್ಕಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಪೂರ್ವ ಭಾಗದ ಬನವಾಸಿಯಲ್ಲಿ ವರದಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಭಾನುವಾರ ಮಧ್ಯಾಹ್ನದ ವರೆಗೂ ಬಿರುಸಾಗಿದ್ದ ಮಳೆ ನಂತರ ಕೊಂಚ ಬಿಡುವು ಕೊಟ್ಟಿದೆ.

ತಾಲ್ಲೂಕಿನ ಕಾನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೊಂಡಿಲಬೈಲಿನಲ್ಲಿ ಕೆರೆಯ ಕೋಡಿ ಒಡೆದು ಸುಮಾರು 15 ಎಕರೆ ಗದ್ದೆಗೆ ಹಾನಿ ಸಂಭವಿಸಿದೆ. ಭಾನುವಾರ ಬೆಳಿಗ್ಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ 61 ಮಿ.ಮೀ. ಮಳೆ ದಾಖಲಾಗಿದೆ.

ಚುರುಕು ಪಡೆದ ಕೃಷಿ ಚಟುವಟಿಕೆ
ಅಂಕೋಲಾ: ತಾಲ್ಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಉತ್ತಮ ಮಳೆ ಬೀಳುತ್ತಿದ್ದು, ಇದರಿಂದಾಗಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದೆ.
ಕೆಲ ವರ್ಷಗಳಿಂದ ಆರಂಭದಲ್ಲಿ ಮಳೆಯು ಕೈಕೊಡುತ್ತಿದ್ದರಿಂದ ಅನ್ನದಾತನ ಕಣ್ಣೀರಿಗೆ ಕಾರಣವಾಗಿತ್ತು. ಆದರೆ ಈ ವರ್ಷ ಮಳೆ ಉತ್ತಮವಾಗಿ ಬೀಳುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ತಾಲ್ಲೂಕಿನ  ಸುಮಾರು 6,300 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಈಗಾಗಲೇ ಸುಮಾರು 2,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಹಾಗೂ ನಾಟಿ ಪೂರ್ಣಗೊಂಡಿದೆ.

ಕಳೆದ ವರ್ಷ ಈ ವರೆಗೆ 213 ಮಿ.ಮೀ. ಮಳೆ  ಬಿದ್ದಿದ್ದು, ಈ ವರ್ಷ 755 ಮಿ.ಮೀ. ಮಳೆ ಸುರಿದು ದಾಖಲೆ ನಿರ್ಮಿಸಿದೆ. ಕೂಲಿಯಾಳುಗಳ ಕೊರತೆಯ ನಡುವೆಯೂ ಕೃಷಿ ಚಟುವಟಿಕೆಯ ಮುಂದುವರಿದಿದೆ.

ಕಾರಿನ ಮೇಲೆ ಮರ: ಜಖಂ
ದಾಂಡೇಲಿ:
ರಾತ್ರಿಯಿಡಿ ಸುರಿದ  ಮಳೆಗೆ ಧರೆಗುರುಳಿದ ಮರದ ಅಡಿ ಸಿಕ್ಕ ಕಾರೊಂದು ಸಂಪೂರ್ಣ ಜಖಂಗೊಂಡ ಘಟನೆ ಇಲ್ಲಿಯ ಲೋಕೋಪಯೋಗಿ ಇಲಾಖೆ ಪ್ರವಾಸಿಗೃಹದ ಆವರಣದಲ್ಲಿ ನಡೆದಿದೆ.

ಜೋಯಿಡಾ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಆನಂದ ಕುಲಕರ್ಣಿ ವಾಸವಾಗಿರುವ ನಗರದ ಲೋಕೋಪಯೋಗಿ ಇಲಾಖೆ ವಸತಿಗೃಹಕ್ಕೆ ಬೆಳಗಾವಿಯ ಅವರ ಸಂಬಂಧಿಕರಾದ ಎನ್.ಆರ್.ಜೋಷಿ ಕುಟುಂಬ ಆಗಮಿಸಿದ್ದರು.

ಆವರಣದಲ್ಲಿ ನಿಲ್ಲಿಸಿಟ್ಟ ಅವರ ಕಾರಿನ ಮೇಲೆ ಪಕ್ಕದಲ್ಲೇ ಇದ್ದ ಭಾರಿ ಗಾತ್ರದ ಮರವೊಂದು  ಉರುಳಿದ್ದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಕೊಟ್ಟಿಗೆಗೆ ಹಾನಿ
ಸಿದ್ದಾಪುರ:
ತಾಲ್ಲೂಕಿನಲ್ಲಿ ಭಾನುವಾರವೂ ಮಳೆಯ ರಭಸ ಮುಂದುವರಿದಿದ್ದು,  ಬಿಡುವು ನೀಡುತ್ತ ಮಳೆ ಸುರಿದಿದೆ.
ತಾಲ್ಲೂಕಿನ ಕೋಡ್ಕಣಿಯಲ್ಲಿ ಕೊಟ್ಟಿಗೆ ಮನೆಯೊಂದಕ್ಕೆ ಹಾನಿಯಾಗಿದ್ದು, ರೂ 15 ಸಾವಿರ ನಷ್ಟದ ಅಂದಾಜು ಮಾಡಲಾಗಿದೆ. ಭಾನುವಾರ ಬೆಳಿಗ್ಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ಪಟ್ಟಣದ ಮಳೆಮಾಪನ ಕೇಂದ್ರದಲ್ಲಿ 52.2 ಮಿ.ಮೀ. ಮಳೆ ಸುರಿದಿದೆ.

ಇದುವರೆಗೆ ಒಟ್ಟು 1762.4 ಮಿ.ಮೀ. ಮಳೆ ದಾಖಲಾಗಿದ್ದು, 824.2 ಮಿ.ಮೀ. ಮಳೆ ಸುರಿದಿತ್ತು ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.