ADVERTISEMENT

ನೌಕಾನೆಲೆಯಲ್ಲಿ ಟೌನ್‌ಶಿಪ್: ಕಾರವಾರ ಮಾರುಕಟ್ಟೆಗೆ ಪೆಟ್ಟು

​ಪ್ರಜಾವಾಣಿ ವಾರ್ತೆ
Published 20 ಮೇ 2011, 8:25 IST
Last Updated 20 ಮೇ 2011, 8:25 IST

ಕಾರವಾರ: ದಿನಸಿ ವಸ್ತು ಖರೀದಿಗೆ, ಬ್ಯಾಂಕ್, ಅಂಚೆ ಕಚೇರಿ ಕೆಲಸಕ್ಕೆಂದು `ಕದಂಬ~ ನೌಕಾನೆಲೆಯ ನಾವಿಕರು ಹಾಗೂ ಸಿಬ್ಬಂದಿ ಕಾರವಾರ ನಗರಕ್ಕೆ ಬರುವುದು ಮುಂದಿನ ದಿನಗಳಲ್ಲಿ ತಪ್ಪಲಿದೆ.

ಸುಸಜ್ಜಿತವಾದ, ಅತ್ಯಾಧುನಿಕ ಸೌಲಭ್ಯವುಳ್ಳ `ಟೌನ್‌ಶಿಪ್~ ಮೇ 21ರಂದು ಉದ್ಘಾಟನೆಗೊಳ್ಳಲಿದ್ದು ಎಲ್ಲ ಸೌಲಭ್ಯಗಳು ಅಲ್ಲಿ ದೊರಕಲಿದ್ದು ಸ್ಥಳೀಯ ಮಾರುಕಟ್ಟೆ ಮೇಲೆ ಪರೋಕ್ಷವಾದ ಪರಿಣಾಮ ಬೀರಲಿದೆ.

ನೌಕಾನೆಲೆ ನಾವಿಕರು ಹಾಗೂ ಸಿಬ್ಬಂದಿ ದಿನನಿತ್ಯದ ಬಳಕೆಯ ವಸ್ತುಗಳಿಗೆ ಕಾರವಾರ ಮಾರುಕಟ್ಟೆ ಬರುತ್ತಿದ್ದರು. ಇದರಿಂದಾಗಿ ವ್ಯಾಪಾರ ವಹಿವಾಟಿನಲ್ಲಿ ಏರಿಕೆಯೂ ಕಂಡುಬಂದಿತ್ತು. ನೌಕಾನೆಲೆ ಯೋಜನಾ ಪ್ರದೇಶದಲ್ಲೇ ಈಗ `ಶಾಪಿಂಗ್ ಕಾಂಪ್ಲೆಕ್ಸ್~ ನಿರ್ಮಾಣವಾಗಿದ್ದರಿಂದ ನಗರದಲ್ಲಿರುವ ಕಿರಾಣಿ ಸೇರಿದಂತೆ ಇನ್ನಿತರ ವಾಣಿಜ್ಯ ಮಳಿಗೆಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖ ಆಗುವ ಸಾಧ್ಯತೆಗಳಿವೆ.

ನೌಕಾನೆಲೆಯಲ್ಲಿರುವ ಟೌನ್‌ಶಿಪ್‌ನಲ್ಲಿ ಆಧುನಿಕ ಸೌಲಭ್ಯಗಳ್ಳುಳ್ಳ 336 ಮನೆ, ಸಮುದಾಯ ಭವನ, ಬ್ಯಾಂಕ್‌ಅಂಚೆ ಕಚೇರಿ, ಮನರಂಜನಾ ತಾಣ, ಉತ್ತಮ ಸೌಲಭ್ಯಗಳುಳ್ಳ ಆಟದ ಅಂಗಳವಿದೆ.

`ಸೀಬರ್ಡ್~ ಯೋಜನೆಯಡಿ ಕಾರವಾರದಲ್ಲಿ ನೌಕಾನೆಲೆ ಸ್ಥಾಪಿಸುವ ಬಗ್ಗೆ 1985ರಲ್ಲಿ ಅಂದಿನ ಕೇಂದ್ರ ಸರಕಾರ ನಿರ್ಣಯ ಕೈಗೊಂಡಿತು. 1986, ಅಕ್ಟೋಬರ್ 24ರಂದು ಪ್ರಧಾನಿ ದಿ. ರಾಜೀವಗಾಂಧಿ ಅವರು ಯೋಜನೆಗೆ ಅಡಿಗಲ್ಲು ಹಾಕಿದರು. ಅಡಿಗಲ್ಲು ಹಾಕಿದ ಹತ್ತು ವರ್ಷಗಳ ನಂತರ ಯೋಜನೆ ಕಾಮಗಾರಿ ಪ್ರಾರಂಭವಾಯಿತು.

ಪ್ರಥಮ ಹಂತದ ಕಾಮಗಾರಿ ಮುಕ್ತಾಯಗೊಂಡ ನಂತರ ಮೇ 31, 2005ರಂದು ರಕ್ಷಣಾ ಸಚಿವ ಪ್ರಣವ್ ಮುಖರ್ಜಿ ಈ ನಾಕಾನೆಲೆಗೆ `ಕದಂಬ~ ನೌಕಾನೆಲೆ ಎಂದು ನಾಮಕರಣ ಮಾಡಿ ದೇಶಕ್ಕೆ ಒಪ್ಪಿಸಿದರು.
ಅಂದಿನ ನೌಕಾನೆಲೆಯಲ್ಲಿ ಚಟುವಟಿಕೆಗಳು ಪ್ರಾರಂಭವಾಗಿದ್ದು ದೊಡ್ಡಗಾತ್ರದ ಹಡಗುಗಳು ಇಲ್ಲಿ ಲಂಗರು ಹಾಕುತ್ತಿವೆ.


ಯುದ್ದ ನೌಕೆ ಹಾಗೂ ಸಬ್‌ಮರಿನ್‌ಗಳು ಲಂಗರು ಹಾಕಲು 615 ಮೀಟರ್ ಉದ್ದದ ಜಟ್ಟಿ. ಹಡಗುಗಳ ದುರಸ್ತಿ, ನಿರ್ವಹಣೆ ಕಾರ್ಯ ಕೈಗೊಳ್ಳಲು ಅನುಕೂಲ ಆಗುವಂತೆ ಶಿಫ್ಟಲಿಪ್ಟ್ ಸೌಲಭ್ಯ, 149 ಹಾಸಿಗೆಯುಳ್ಳ ಅತ್ಯಾಧುನಿಕ ಆಸ್ಪತ್ರೆ, ಯುದ್ಧದ ಸಲಕರಣೆಗಳನ್ನು ಇಡುವ ಡಿಪೋ, ವಸತಿ ವ್ಯವಸ್ಥೆ. ಕೇಂದ್ರೀಯ ಶಾಲೆ, ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಹಾಗೂ ಮನರಂಜನಾ ಸೌಲಭ್ಯಗಳು ಒಂದನೇ ಹಂತದ ಕಾಮಗಾರಿಯ ವೇಳೆ ಪೂರ್ಣಗೊಂಡಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT