ADVERTISEMENT

ಪಕ್ಷಕ್ಕೆ ಪ್ರವಾಹ: ಸಂಸದ ಹೆಗಡೆ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 6:05 IST
Last Updated 3 ಅಕ್ಟೋಬರ್ 2011, 6:05 IST
ಪಕ್ಷಕ್ಕೆ ಪ್ರವಾಹ: ಸಂಸದ ಹೆಗಡೆ ಟೀಕೆ
ಪಕ್ಷಕ್ಕೆ ಪ್ರವಾಹ: ಸಂಸದ ಹೆಗಡೆ ಟೀಕೆ   

ಕಾರವಾರ: ಭಾರತೀಯ ಜನತಾ ಪಕ್ಷದಲ್ಲೆಗ ಪ್ರವಾಹ ಬಂದಿದೆ. ಕೊಚ್ಚೆ, ಕೊಳಕು, ಕಸಕಡ್ಡಿ ಎಲ್ಲವೂ ಬಂದು ಸೇರುತ್ತಿದೆ. ಇದು ಬಿಜೆಪಿ ಪಕ್ಷವೇ ಎಂದು ಸಾಮಾನ್ಯರು ಪ್ರಶ್ನಿಸುವಂತಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.

ಪಂಡಿತ ದಿನ ದಯಾಳ್ ಉಪಾಧ್ಯಾಯ ಅವರ ಜನ್ಮದಿನಾಚರಣೆ ಅಂಗವಾಗಿ ನಗರದ ದೈವಜ್ಞ ಸಭಾಭವನದಲ್ಲಿ ಶನಿವಾರ ನಡೆದ ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿ ಸೇರ್ಪಡೆ ಆಗಿರುವುದನ್ನು ಪರೋಕ್ಷವಾಗಿ ಟೀಕಿಸಿದರು.

ಜರಿ ನೀರು, ರಾಡಿ ನೀರು ಎಲ್ಲವೂ ಇಲ್ಲಿ ಬಂದು ಸೇರುತ್ತಿದೆ. ಪಕ್ಷದ ಸಿದ್ಧಾಂತಕ್ಕೆ ಧಕ್ಕೆ ತಂದಿರುವ ಈ ಪ್ರವಾಹ ತಣ್ಣಗಾಗುತ್ತಿದೆ. ಜನ ಸಾಮಾನ್ಯ ನಿರೀಕ್ಷೆಯಂತೆ ಪಕ್ಷ ಕಾರ್ಯನಿರ್ವಹಿಸಲಿದೆ ಎಂದರು.
ಬಿಜೆಪಿ ತತ್ವ, ಸಿದ್ಧಾಂತದ ಮೇಲೆ ಸಂಘಟನೆಗೊಂಡ ಪಕ್ಷ.

ದೊಡ್ಡದೊಡ್ಡ ನಾಯಕರು, ನೇತಾರರಾರು ಪಕ್ಷವನ್ನು ಕಟ್ಟಿಲ್ಲ. ಪಕ್ಷ ಸಂಘಟನೆಗಾಗಿ ಎಲೆಮರೆ ಕಾಯಿಯಂತೆ ದುಡಿದವರು ಸಹಸ್ರ ಸಂಖ್ಯೆಯಲ್ಲಿದ್ದಾರೆ. ಇತಿಹಾಸದ ಪುಟ ತಿರುವಿದರೆ ಇದು ಗೊತ್ತಾಗುತ್ತದೆ ಎಂದು ನುಡಿದರು.

ಸಮಾಜ ಕಟ್ಟಬೇಕು ಎಂದು ಬಂದವರು ನಾವು (ಬಿಜೆಪಿ). ರಾಜಕೀಯಕ್ಕೆ ವ್ಯವಹಾರಿಕ ದೃಷ್ಟಿಕೋನ ಬಂದಿರುವುದರಿಂದ ನಾವ್ಯಾರು ಎನ್ನುವುದನ್ನೇ ಮರೆತ್ತಿದ್ದೇವೆ. ಬಿಜೆಪಿಯನ್ನು ಶಿಸ್ತಿನ ಪಕ್ಷ ಎಂದು ನಂಬಿದವರು. ನಿಮಗೂ ಅವರಿಗೂ (ಕಾಂಗ್ರೆಸ್) ಏನು ವ್ಯತ್ಯಾಸ ಎಂದು ಕೇಳುತ್ತಿದ್ದಾರೆ. ಇದು ಬದಲಾಬೇಕು ಎಂದರು.

ರಾಜಕಾರಣಿಗಳೆಂದರೆ ಮೋಸ ಗಾರರು ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಇದು ಗಂಭೀರವಾದ ವಿಚಾರ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಾದವರು ತಮ್ಮ ಕರ್ತವ್ಯ ಅರಿತು ಕೆಲಸ ಮಾಡಬೇಕಾಗಿದೆ. ಬದಲಾವಣೆಯಲ್ಲಿ ದೇಶದ ಭವಿಷ್ಯ ಅಡಗಿದೆ. ಹೀಗೇ ಮುಂದುವರಿದರೆ ಸಮುದಾಯ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ನಾವೆಲ್ಲರೂ ಉತ್ತಮ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು. ಆಗಮಾತ್ರ ಸಂಘಟನೆಯಲ್ಲಿ ಶಿಸ್ತು ಬರುತ್ತದೆ. ನಾನು ಮತ್ತು ಚಮಚಾಗಳಿದ್ದರೆ ಮಾತ್ರ ಪಕ್ಷ ಸಂಘಟನೆ ಎನ್ನುವ ಭ್ರಮೆ ಬೇಡ. ಪಕ್ಷಕ್ಕಾಗಿ ಬೆವರು ಸುರಿಸಿದವರು ಅನೇಕರಿದ್ದಾರೆ. ಅವರೆಲ್ಲರ ಶ್ರಮದಿಂದಾಗಿ ನಾವಿಂದು ಈ ಸ್ಥಾನದಲ್ಲಿದ್ದೇವೆ ಎಂದು ಹೆಗಡೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ರಾಜಕೀಯ ವಾತಾವರಣ ಕಲುಷಿತಗೊಂಡಿದೆ ಎಂದರು.

ಇಲ್ಲಿಯವರೆಗೆ ಆಗಿರುವುದೆಲ್ಲವನ್ನು ಮರೆತು ಭವಿಷ್ಯದತ್ತ ನೋಡೋಣ. ಪಕ್ಷ ಅಧಿಕಾರಕ್ಕೆ ಬಂದು ಈಗಾಗಲೇ ಮೂರು ವರ್ಷ ಕಳೆದಿದೆ. ಉಳಿದ ಅವಧಿಯಲ್ಲಿ ಉತ್ತಮ ಕೆಲಸಕಾರ್ಯಗಳನ್ನು ಕೈಗೊಂಡು ಮಾದರಿ ರಾಜ್ಯ ನಿರ್ಮಾಣ ಮಾಡಬೇಕಿದೆ ಎಂದರು.

ಅಂಕೋಲಾ ಮತ್ತು ಕಾರವಾರ ಕ್ಷೇತ್ರದಲ್ಲಿ ಪಕ್ಷದ ಅಭಿವೃದ್ಧಿಗಾಗಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲೂ ನಾನು ಪಾಲ್ಗೊಳ್ಳುತ್ತೇನೆ ಎಂದು ಸಚಿವರು ಹೇಳಿದರು.ಅಂಕೋಲಾ ಎಪಿಎಂಸಿ ಅಧ್ಯಕ್ಷ ಶಿವಪ್ಪ ನಾಯಕ, ಮಹಿಳಾ ಸಮಿತಿಯ ಪದಾಧಿಕಾರಿ ಜಯಾ ನಾಯ್ಕ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಿತೀನ್ ಪಿಕಳೆ, ಗೇರು ನಿಗಮದ ಅಧ್ಯಕ್ಷ ವಿನೋದ ಪ್ರಭು ಹಾಜರಿದ್ದರು.

ಸ್ವಾತಿ ವೆರ್ಣೇಕರ್ ವಂದೇ ಮಾತರಂ ಗೀತೆ ಹಾಡಿದರು. ಪಕ್ಷದ ಮುಖಂಡ ಎಮ್.ಜಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ ನಾಯ್ಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.