ADVERTISEMENT

ಪಕ್ಷಿಧಾಮದ ವೀಕ್ಷಣಾ ಗೋಪುರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 6:40 IST
Last Updated 13 ಸೆಪ್ಟೆಂಬರ್ 2011, 6:40 IST

ಶಿರಸಿ: ತಾಲ್ಲೂಕಿನ ಸೋಂದಾ ಮುಂಡಿಗೆಕೆರೆ ಪಕ್ಷಿಧಾಮದ ಸಮೀಪ ನಿರ್ಮಿಸಿರುವ ವೀಕ್ಷಣಾ ಗೋಪುರ ಸಾರ್ವಜನಿಕ ಬಳಕೆಗೆ ಮುಕ್ತಗೊಂಡಿದೆ. ರೂ.5ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವೀಕ್ಷಣಾ ಗೋಪುರವನ್ನು ಸ್ವರ್ಣವಲ್ಲೆ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸದಾಶಿವ ದೇವಸ್ಥಾನದ ಆವಾರದಲ್ಲಿ ರೂ.10ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಪ್ರವಾಸಿ ಮಂದಿರ ಉದ್ಘಾಟಿಸಲಾಯಿತು. ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಉತ್ತರ ಕನ್ನಡ ಜಿಲ್ಲೆಗೆ ಬೃಹತ್ ಯೋಜನೆ ಬೇಡವೆಂಬ ಉದ್ದೇಶದಿಂದ ಪರಿಸರ ಪೂರಕ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ.

ಉ.ಕ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ರೂ.70ಲಕ್ಷ ಅನುದಾನ ದೊರೆತಿದೆ  ಎಂದರು. ಐತಿಹಾಸಿಕ ಪರಂಪರೆ ಹೊಂದಿರುವ ಸೋಂದಾದಲ್ಲಿ ಜಾಗೃತ ವೇದಿಕೆ ಸರ್ಕಾರದ ವಿವಿಧ ಯೋಜನೆ ತಂದು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಶ್ರೀಗಳು, ಮುಂಡಿಗೆಕೆರೆ ಪಕ್ಷಿಧಾಮದ ಕುರಿತು ಮಾತನಾಡಿ ಮನುಷ್ಯರು ಇಂದಿನ ದಿನಗಳಲ್ಲಿ ತಂದೆ-ತಾಯಿಗಳಿಂದ ದೂರ ಹೋಗುತ್ತಾರೆ.
 
ವಲಸೆ ಬಂದ ಹಕ್ಕಿಗಳು ಜೀವನ ಪರ್ಯಂತ ದಂಪತಿಗಳಾಗಿ ಮಕ್ಕಳ ಪೋಷಣೆ ಮಾಡುತ್ತವೆ ಎಂದರು. ಸೋಂದಾ ಕೋಟೆ ಆವರಣ ಅಭಿವೃದ್ಧಿಗೆ ಅನುದಾನದ ಅಗತ್ಯವಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನೆರವು ಬೇಕಾಗಿದೆ ಎಂದು ಅವರು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಂಗಲಾ ಭಟ್ಟ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಡಿ.ಹೆಗಡೆ, ಶೋಭಾ ನಾಯ್ಕ, ತಾ.ಪಂ. ಸದಸ್ಯೆ ಶೈಲಜಾ ನಾಯ್ಕ, ಹುಲೇಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಅಭಿಯಂತ ವಿಜಯಕುಮಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.