ADVERTISEMENT

ಪರೀಕ್ಷೆ ಮುಂದೂಡಿಕೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 7:29 IST
Last Updated 11 ಅಕ್ಟೋಬರ್ 2017, 7:29 IST

ಕಾರವಾರ: ಕರ್ನಾಟಕ ವಿಶ್ವವಿದ್ಯಾಲಯದ ಸೆಮಿಸ್ಟರ್‌ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಒತ್ತಾಯಿಸಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜು ಬಳಿಯಿಂದ ನೂರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದರು. ದಿವೇಕರ ವಾಣಿಜ್ಯ ಕಾಲೇಜು, ಶಿವಾಜಿ ಕಾಲೇಜು ಹಾಗೂ ಬಾಪೂಜಿ ಕಾಲೇಜಿನ ವಿದ್ಯಾರ್ಥಿಗಳು ಸಹ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ವಿಶ್ವವಿದ್ಯಾಲಯವು ಅವೈಜ್ಞಾನಿಕ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ ಹಾಗೂ ಬಿ.ಎಸ್ಸಿ ಸೆಮಿಸ್ಟರ್‌ ಪರೀಕ್ಷೆಗಳು ಇದೇ 23ರಿಂದ ಆರಂಭಗೊಳ್ಳಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೇಗನೇ ಪರೀಕ್ಷೆಗಳನ್ನು ನಿಗದಿ ಮಾಡಲಾಗಿದೆ. ಪಠ್ಯಕ್ರಮ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ತೀವ್ರ ಆತಂಕಕ್ಕೀಡಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪರೀಕ್ಷೆ ಎದುರಿಸಲು ಸಾಧ್ಯವಿಲ್ಲ. ಹೀಗಾಗಿ ಪರೀಕ್ಷೆಯನ್ನು ಮುಂದೂಡಬೇಕು’ ಎಂದು ವಿದ್ಯಾರ್ಥಿ ಮುಖಂಡ ಆಶಿಶ್‌ ಗಾಂವಕರ್‌ ಆಗ್ರಹಿಸಿದರು.

ಅಂತರ ಕೂಡ ಇಲ್ಲ: ‘ಬಿ.ಕಾಂ ಪರೀಕ್ಷೆಗಳಿಗೆ ಯಾವುದೇ ಅಂತರ ಕೂಡ ನೀಡಿಲ್ಲ. ಪರೀಕ್ಷೆಗಳನ್ನು ನಿರಂತರವಾಗಿ ಎದುರಿಸುವುದರಿಂದ ಮಾನಸಿಕ ಒತ್ತಡ ಬೀಳಲಿದೆ. ವಿಶ್ವವಿದ್ಯಾಲಯ ಈ ಎಲ್ಲ ಅಂಶಗಳನ್ನು ಪರಿಗಣಿಸಿ, ನವೆಂಬರ್‌ ತಿಂಗಳಿಗೆ ಪರೀಕ್ಷೆಯನ್ನು ಮುಂದೂಡಬೇಕು. ಇದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ವಿದ್ಯಾರ್ಥಿನಿ ವಿನುತಾ ಸಾವಂತ್‌ ಮನವಿ ಮಾಡಿದರು.

ADVERTISEMENT

ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ ಅವರಿಗೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳಾದ ಸಚಿನ್‌ ಸ್ವಾರ್, ಸ್ಯಾಮ್‌ಸನ್‌ ಫರ್ನಾಂಡಿಸ್‌, ಮೊಹಮ್ಮದ್‌ ಶೇಖ್‌, ಸೋಮೇಶ ಆಚಾರಿ, ಸಾರಾ, ಆಸೀಫ್‌ ನದಾಫ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.