ADVERTISEMENT

ಪರೇಶ ಮೇಸ್ತ ಸಾವಿನ ಕುರಿತ ಪ್ರಕರಣದ ಶೀಘ್ರ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 6:29 IST
Last Updated 24 ಡಿಸೆಂಬರ್ 2017, 6:29 IST

ಹೊನ್ನಾವರ: ‘ಶವವಾಗಿ ಪತ್ತೆಯಾದ ಪರೇಶ ಮೇಸ್ತ ಅವರ ಅನುಮಾನಾಸ್ಪದ ಸಾವಿನ ಕುರಿತ ಪ್ರಕರಣದ ತನಿಖೆಯನ್ನು ಶೀಘ್ರ ಕೈಗೊಂಡು, ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶನಿವಾರ ಇಲ್ಲಿನ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

‘ಪರೇಶ ಅವರದ್ದು ಸಹಜ ಸಾವು ಎಂದು ಹೇಳಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಸರ್ಕಾರದಿಂದ ನಡೆಯುತ್ತಿದೆ. ಈ ಹಿಂದೆ ಮಡಿಕೇರಿಯ ಕುಟ್ಟಪ್ಪ ಅವರನ್ನು ಜಿಹಾದಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾಗಲೂ ರಾಜ್ಯ ಸರ್ಕಾರ ಸಹಜ ಸಾವು ಎಂದು ಆ ಪ್ರಕರಣವನ್ನು ತಿರುಚಲು ಪ್ರಯತ್ನಿಸಿತ್ತು. ರಾಜ್ಯದಲ್ಲಿ 20ಕ್ಕೂ ಅಧಿಕ ಹಿಂದೂ ನಾಯಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಜ್ಯ ಸರ್ಕಾರದ ಮುಸ್ಲಿಂ ಓಲೈಕೆ ನೀತಿ ಮತ್ತು ಹಿಂದೂ ವಿರೋಧಿ ಧೋರಣೆಯೇ ಇದಕ್ಕೆಲ್ಲ ಕಾರಣವಾಗಿದೆ’ ಎಂದು ದೂರಿದರು.

‘ಈ ಹತ್ಯೆಗಳ ಹಿಂದಿರುವ ಜಾಲವನ್ನು ಪತ್ತೆ ಹಚ್ಚಿ, ಸಂಬಂಧಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಹಿಂದೂ ನಾಯಕರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು’ ಎಂದು ಮನವಿ ಮಾಡಿದರು. ಪ್ರಮುಖರಾದ ವಾಸಂತಿ ಮುರ್ಡೇಶ್ವರ, ಚಂದ್ರಶೇಖರ ಮೇಸ್ತ, ಪ್ರಕಾಶ ಮೇಸ್ತ, ಜಯಶ್ರೀ ಕಲ್ಗಲ್, ಪಾರ್ವತಿ ಭಟ್, ವಿವೇಕ ಶೇಟ್‌ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.