ADVERTISEMENT

ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ಧ ಕಬ್ಬು ಬೆಳೆಗಾರರ ಧರಣಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 9:13 IST
Last Updated 12 ಡಿಸೆಂಬರ್ 2012, 9:13 IST

ಹಳಿಯಾಳ: ಸ್ಥಳೀಯ ಪ್ಯಾರಿ ಸಕ್ಕರೆ ಕಾರ್ಖಾನೆಯವರು ತಾಲ್ಲೂಕಿನಲ್ಲಿ ರೈತರು ಬೆಳೆದ ಕಬ್ಬುಗಳನ್ನು ಕಡೆಗಣಿಸಿ ಬೇರೆ ತಾಲ್ಲೂಕಿನ ಕಬ್ಬು ಬೆಳೆಗಾರರ ಹೊಲಗಳಿಗೆ ಕಬ್ಬು ಕಡಿಯಲು ಗ್ಯಾಂಗ್‌ಗಳನ್ನು ಕಳುಹಿಸಿ ತಮಗೆ ಅನ್ಯಾಯ ಎಸೆಗುತ್ತಿದ್ದಾರೆಂದು ಆರೋಪಿಸಿ ತಾಲ್ಲೂಕು ಕಬ್ಬು ಬೆಳೆಗಾರರ ಸಂಘ ಸೋಮವಾರ ಪ್ಯಾರಿ ಸಕ್ಕರೆ ಕಾರ್ಖಾನೆಯ ವಿರುದ್ಧ ಪ್ರತಿಭಟನೆ ನಡೆಸಿತು.

ಸ್ಥಳೀಯ ಮರಾಠಾ ಭವನದಲ್ಲಿ ಸಭೆ ನಡೆಸಿದ ರೈತರು ಅಲ್ಲಿಂದ ಪ್ಯಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗುತ್ತಾ ಶಿವಾಜಿ ಸರ್ಕಲ್ ಬಳಿ ಸೇರಿ 2 ತಾಸಿಗೂ ಹೆಚ್ಚು ರಸ್ತೆ ತಡೆದು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಮುಖಂಡರು ಮಾತನಾಡಿ, `ಸ್ಥಳಿಯ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಸ್ಥಳಿಯರಿಗೆ ಆದ್ಯತೆ ನೀಡದೇ ಬೇರೆ ತಾಲ್ಲೂಕಿನ ಕಬ್ಬು ಬೆಳೆಗಾರರ ರೈತರ ಹೊಲಗಳಿಗೆ ಕಬ್ಬು ಕಡಿಯಲು ಗ್ಯಾಂಗ್‌ಗಳನ್ನು ತರುತ್ತಿದ್ದಾರೆ. ಈ ಬಗ್ಗೆ ಕಳೆದ ಎರಡು ತಿಂಗಳಿಂದ ಸಂಬಂಧ ಪಟ್ಟ ಕಾರ್ಖಾನೆಯ ಆಡಳಿತ ಮಂಡಳಿಯವರಿಗೆ ಹಾಗೂ ತಾಲ್ಲೂಕು ಆಡಳಿತ ವರ್ಗಕ್ಕೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯಿಂದ ಸ್ಪಂದನೆಯಾಗುತ್ತಿಲ್ಲ' ಎಂದು ದೂರಿದರು.

ತಹಶೀಲ್ದಾರ ಶಾರದಾ ಕೋಲಕಾಲ ಪ್ರತಿಭಟನಾ ನಿರತರ ಬಳಿ ತೆರಳಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ವರ್ಗದ ಅಧಿಕಾರಿಗಳನ್ನು ಕಾರ್ಯಾಲಯಕ್ಕೆ ಕರೆಯಿಸಿ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಆದರೆ ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಗಲೇ ಈಡೇರಿಸಬೇಕೆಂದು ಪಟ್ಟು ಹಿಡಿದು ಕೂಡಲೇ ಸಕ್ಕರೆ ಕಾರ್ಖಾನೆಯ ಅಧಿಕಾರಿ ವರ್ಗದವರನ್ನು ಧರಣಿ ನಿರತರ ಬಳಿ ಕರೆಯಿಸಬೇಕೆಂದು ಆಗ್ರಹಿಸಿದರು.

ನಂತರ ಕೆಲ ಪ್ರತಿಭಟನಾ ನಿರತ ಕಬ್ಬು ಬೆಳೆಗಾರರ ಗುಂಪು ಮತ್ತೆ ಘೋಷಣೆಗಳನ್ನು ಕೂಗುತ್ತಾ ಪ್ಯಾರಿ ಸಕ್ಕರೆ ಕಾರ್ಖಾನೆಯ ಬಳಿ ತೆರಳಿ ಧರಣಿ ನಡೆಸಿದರು.

ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ, ಕಾರ್ಯದರ್ಶಿ ಅಶೋಕ ಮೇಟಿ, ರಾಜ್ಯ ಕಾರ್ಯದರ್ಶಿ ಎಂ.ವಿ. ಘಾಡಿ, ಶಂಕರ ಕಾಜಗಾರ,ಎಸ್.ಕೆ.ಗೌಡಾ, ಕುಮಾರ ಬೊಬಾಟಿ, ಕುಮಾರ ಜಾವಳೇಕರ, ಬಿ.ಡಿ.ಚೌಗುಲೆ, ಮುಂಡಗೋಡ ಸಾತು ಬನಸೋಡೆ, ಗಣೇಶ ನೆಲಗೆ, ಈರಯ್ಯಾ ಹಿರೇಮಠ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.