ಕಾರವಾರ: ಕಾರವಾರ-ಮಡಗಾಂವ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲು ಪದೇಪದೇ ಕೆಟ್ಟು ನಿಲ್ಲುವುದನ್ನು ಖಂಡಿಸಿ ತಾಲ್ಲೂಕಿನ ವಿವಿಧೆಡೆಯಿಂದ ಪ್ರತಿನಿತ್ಯ ಗೋವಾಕ್ಕೆ ಹೋಗುವ ನೂರಾರು ಉದ್ಯೋಗಿಗಳು, ಪ್ರಯಾಣಿಕರು ಬುಧವಾರ ಗೋವಾ ರಾಜ್ಯದ ಲೊಲೆಮ್ ರೈಲು ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಬಿಸಿ ಮೂವರನ್ನು ಬಂಧಿಸಿದರು.
ಬಂಧನಕ್ಕೊಳಗಾದವರನ್ನು ತಾಲ್ಲೂಕಿನ ನಿವಾಸಿಗಳಾದ ಸಚ್ಚಿದಾನಂದ ನಾಯ್ಕ, ಅರುಣು ಮಾಳ್ಸೇಕರ್, ಅನಿಲ್ ಪೆಡ್ನೇಕರ್ ಎಂದು ಗುರುತಿಸಲಾಗಿದೆ. ಮೂವರನ್ನು ಸಂಜೆಯ ಹೊತ್ತಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಘಟನೆ ವಿವರ: ಬೆಳಿಗ್ಗೆ 6ಕ್ಕೆ ಇಲ್ಲಿಯ ರೈಲು ನಿಲ್ದಾಣದಿಂದ ಗೋವಾಕ್ಕೆ ಹೊರಟ ಪ್ಯಾಸೆಂಜರ್ ರೈಲು ಎಂಜಿನ್‌ನಲ್ಲಿ ದೋಷ ಕಂಡಬಂದಿದ್ದರಿಂದ ಲೊಲೆಮ್ ರೈಲು ನಿಲ್ದಾಣದಲ್ಲಿ ನಿಂತುಕೊಂಡಿತ್ತು. ಪರ್ಯಾಯ ವ್ಯವಸ್ಥೆಗೆ ರೈಲು ನಿಲ್ದಾಣದ ಅಧಿಕಾರಿಗಳು ತಕ್ಷಣದಲ್ಲಿ ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಸರ್ಕಾರಿ, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗದೆ ತೊಂದರೆಗೊಳದಾದರು.
ಈ ರೈಲು 7ಕ್ಕೆ ಮಡಗಾಂವ ತಲುಪಬೇಕಿತ್ತು. ಲೊಲೆಮ್ ರೈಲು ನಿಲ್ದಾಣದಲ್ಲಿ ನಿಂತ ರೈಲು ಇನ್ನೊಂದು ಎಂಜಿನ್ ಅಳವಡಿಸಿಕೊಂಡು ಹೊರಡಲು 2.30 ಗಂಟೆ ಕಾಯಬೇಕಿತ್ತು. ಈ ತಿಂಗಳಲ್ಲಿ ಹೀಗಾಗುತ್ತಿರುವುದು ನಾಲ್ಕನೇ ಬಾರಿ ಆಗಿದ್ದರಿಂದ ಪ್ರಯಾಣಿಕರ ಸಹನೆಯೂ ಕಟ್ಟೆಯೊಡೆದಿತ್ತು. ಸಿಟ್ಟಿಗೆದ್ದ ನೂರಾರು ಉದ್ಯೋಗಿಗಳು ಲೊಲೆಮ್ ರೈಲು ನಿಲ್ದಾಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಿಷಯ ತಿಳಿದ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಗೋವಾಕ್ಕೆ ತೆರಳಿ ಪದೇಪದೇ ರೈಲು ಕೆಟ್ಟುನಿಂತು ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಕೊಂಕಣ ರೈಲ್ವೆ ಸಹಾಯಕ ವ್ಯವಸ್ಥಾಪಕರೊಂದಿಗೆ ಮಾತುಕತೆ ನಡೆಸಿದರು. ರೈಲ್ವೆ ಅಧಿಕಾರಿಗಳು ಪ್ರತಿಭಟನಾನಿರತರನ್ನು ಸಮಾಧಾನಪಡಿಸಲು ಯತ್ನಿಸಿದರು. ಪ್ರತಿಭಟನಾಕಾರರು ಪಟ್ಟು ಸಡಿಲಿಸಲಿಲ್ಲ.
`ಕಳೆದ ಬಾರಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಬಜೆಟ್‌ನ ನಂತರ ನೂತನ ರೈಲು ಓಡಿಸಲಾಗುವುದು ಎಂದು ಭರವಸೆ ನೀಡಿದ್ದೀರಿ. ರೈಲಿನಲ್ಲಿರುವ ಒಂದು ಎಂಜಿನ್‌ನಲ್ಲಿ ದೋಷವಿದೆ ಎನ್ನುವುದು ಗೊತ್ತಿದ್ದರೂ ಪರ್ಯಾಯ ವ್ಯವಸ್ಥೆ ಮಾಡದೆ ರೈಲು ಇಲ್ಲಿ ಕೆಟ್ಟು ನಿಲ್ಲುವಂತೆ ಮಾಡಿದ್ದಾರೆ~ ಎಂದು ದೂರಿದರು.
ಈ ಸಂದರ್ಭದಲ್ಲಿ ಪೊಲೀಸರ ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆದು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು. ಇಂತಹ ತಪ್ಪುಗಳು ಮುಂದಿನ ದಿನಗಳಲ್ಲಿ ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಲಿಖಿತ ಹೇಳಿಕೆ ಪಡೆದುಕೊಂಡ ನಂತರವೇ ಪ್ರತಿಭಟನಾಕಾರರು ಶಾಂತರಾದರು.
ವಿದ್ಯಾರ್ಥಿ ಒಕ್ಕೂಟದ ಸಂದೇಶ ನಾಯ್ಕ, ಈಶ್ವರ ನಾಯ್ಕ, ಜಿತೇಂದ್ರ ಚಿಂಚಣಕರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.