ADVERTISEMENT

ಪ್ರವಾಸಿಗರ ಸಂಚಾರಕ್ಕೆ ಬಾಡಿಗೆ ಸ್ಕೂಟರ್

‘ಮೆಟ್ರೊ ಬೈಕ್ಸ್’ ಸಂಸ್ಥೆಯಿಂದ ಶೀಘ್ರವೇ ಕಾರ್ಯಾರಂಭ; ಕಾರವಾರ, ಗೋಕರ್ಣದಲ್ಲಿ ಲಭ್ಯ

​ಪ್ರಜಾವಾಣಿ ವಾರ್ತೆ
Published 20 ಮೇ 2018, 13:47 IST
Last Updated 20 ಮೇ 2018, 13:47 IST
ಪ್ರವಾಸಿಗರಿಗೆ ಬಾಡಿಗೆ ಆಧಾರದಲ್ಲಿ ದ್ವಿಚಕ್ರ ವಾಹನಗಳನ್ನು ನೀಡುವ ಕುರಿತು ‘ಮೆಟ್ರೊ ಬೈಕ್ಸ್’ ಸಂಸ್ಥೆಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಎಚ್.ಶಮಂತ್ ಅವರು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮತ್ತು ಜಿ.ಪಂ.ಸಿಇಒ ಚಂದ್ರಶೇಖರ ನಾಯಕ ಅವರಿಗೆ ಶನಿವಾರ ವಿವರಿಸಿದರು
ಪ್ರವಾಸಿಗರಿಗೆ ಬಾಡಿಗೆ ಆಧಾರದಲ್ಲಿ ದ್ವಿಚಕ್ರ ವಾಹನಗಳನ್ನು ನೀಡುವ ಕುರಿತು ‘ಮೆಟ್ರೊ ಬೈಕ್ಸ್’ ಸಂಸ್ಥೆಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಎಚ್.ಶಮಂತ್ ಅವರು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮತ್ತು ಜಿ.ಪಂ.ಸಿಇಒ ಚಂದ್ರಶೇಖರ ನಾಯಕ ಅವರಿಗೆ ಶನಿವಾರ ವಿವರಿಸಿದರು   

ಕಾರವಾರ: ನಗರ ಮತ್ತು ಗೋಕರ್ಣಕ್ಕೆ ಬಸ್, ರೈಲುಗಳಲ್ಲಿ ಬಂದವರಿಗೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಾಡಿಗೆ ಬೈಕ್‌ಗಳು ಈಗಾಗಲೇ ಲಭ್ಯವಿವೆ. ಅದರಲ್ಲಿ ತಂತ್ರಜ್ಞಾನ ಬಳಸಿಕೊಂಡು ಸುಧಾರಿತ ವ್ಯವಸ್ಥೆಯನ್ನು ಜಾರಿ ಮಾಡಲು ಬೆಂಗಳೂರಿನ ‘ಮೆಟ್ರೊ ಬೈಕ್ಸ್’ ಸಂಸ್ಥೆ ಮುಂದಾಗಿದೆ. ಮೊಬೈಲ್ ಆ್ಯಪ್ ಆಧಾರಿತ ಸೇವೆ ಮತ್ತು ಕೀ ಇಲ್ಲದೇ ವಾಹನದ ಎಂಜಿನ್ ಚಾಲನೆ ಮಾಡುವುದು ಅದರ ವೈಶಿಷ್ಟ್ಯವಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ಎದುರು ಸುದ್ದಿಗಾರರ ಜತೆ ಮಾತನಾಡಿದ ಸಂಸ್ಥೆಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಎಚ್.ಶಮಂತ್, ‘ಮಹಿಳೆಯರಿಗೂ ಅನುಕೂಲವಾಗುವ ಉದ್ದೇಶದಿಂದ ಗೇರ್ ಇಲ್ಲದ ದ್ವಿಚಕ್ರ ವಾಹನಗಳನ್ನು ನಾವು ಬಾಡಿಗೆಗೆ ನೀಡುತ್ತಿದ್ದೇವೆ. ಪ್ರವಾಸೋದ್ಯಮದಲ್ಲಿ ಭಾಗವಹಿಸುವ ಉದ್ದೇಶದಿಂದ ಉತ್ತರಕನ್ನಡವು ನಾವು ಆಯ್ದುಕೊಂಡ ಮೊದಲ ಜಿಲ್ಲೆಯಾಗಿದೆ’ ಎಂದರು.

ಚಾಲನೆ ಮಾಡುವುದು ಹೇಗೆ?: ಗ್ರಾಹಕರು ಮೊದಲಿಗೆ ಸಂಸ್ಥೆಯ ಮೊಬೈಲ್ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು, ತಮ್ಮ ಚಾಲನಾ ಪರವಾನಗಿ ಹಾಗೂ ಆಧಾರ್ ಕಾರ್ಡ್ ಸಂಖ್ಯೆಗಳನ್ನು ಅದರಲ್ಲಿ ನಮೂದಿಸಬೇಕು. ಅದನ್ನು ಸಂಸ್ಥೆಯ ಸಿಬ್ಬಂದಿ ಪರಿಶೀಲನೆ ಮಾಡಿ 10 ನಿಮಿಷಗಳ ಒಳಗೆ ಗ್ರಾಹಕರ ಮೊಬೈಲ್‌ಗೆ ಒನ್‌ ಟೈಮ್ ಪಾಸ್‌ವರ್ಡ್ (ಒಟಿಪಿ) ಕಳುಹಿಸುತ್ತಾರೆ. ಅದನ್ನು ವಾಹನದ ಕೀ ಹಾಕುವ ಜಾಗದಲ್ಲಿ ಅಳವಡಿಸಿರುವ ಪ್ಯಾನಲ್‌ನಲ್ಲಿ ನಮೂದಿಸಿ ಸ್ಟಾರ್ಟರ್‌ ಸ್ವಿಚ್ ಅನ್ನು ಅದುಮಿದಾಗ ವಾಹನವು ಚಾಲನೆಗೊಳ್ಳುತ್ತದೆ ಎಂದು ಅವರು ವಿವರಿಸಿದರು.

ADVERTISEMENT

ವಾಹನಗಳನ್ನು ಬಳಕೆ ಮಾಡಿದ ನಂತರ ನಗರಸಭೆಯು ವಾಹನ ನಿಲುಗಡೆಗೆ ನಿಗದಿ ಮಾಡಿರುವ ಪ್ರದೇಶದಲ್ಲಿ ನಿಲ್ಲಿಸಿದರೆ ಸಾಕು. ಅದನ್ನು ಮುಂದಿನ ಗ್ರಾಹಕರು ಅಲ್ಲಿಂದಲೇ ಚಾಲನೆ ಮಾಡಿಕೊಂಡು ಹೋಗುತ್ತಾರೆ ಎಂದು ಅವರು ಹೇಳಿದರು.

ದರವೆಷ್ಟು?: ‘ಪ್ರತಿ ಕಿ.ಮೀಗೆ ₹ 5 ಹಾಗೂ ಪ್ರತಿ ಗಂಟೆಗೆ 25 ಪೈಸೆ ಬಾಡಿಗೆ ನಿಗದಿ ಮಾಡಲಾಗಿದೆ. ದಿನದ ಬಾಡಿಗೆಗೂ ದ್ವಿಚಕ್ರ  ವಾಹನಗಳು ಸಿಗುತ್ತವೆ. ಜಿಲ್ಲೆಯಲ್ಲಿ ಸದ್ಯ 70 ದ್ವಿಚಕ್ರ ವಾಹನಗಳು ಲಭ್ಯ ಇರಲಿವೆ. ಗ್ರಾಹಕರು ಇ– ವ್ಯಾಲೆಟ್‌ಗಳು, ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಬಹುದು’ ಎಂದು ಶಮಂತ್ ತಿಳಿಸಿದರು.

ಇದೇವೇಳೆ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ‘ಬಸ್, ರೈಲುಗಳಲ್ಲಿ ಪ್ರವಾಸ ಮಾಡುವ ಪ್ರವಾಸಿಗರಿಗೆ ಇದರಿಂದ ಪ್ರಯೋಜನವಾಗಲಿದೆ. ನಗರದಲ್ಲಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ಜಾಗ ನಿಗದಿಪಡಿಸಲಾಗುವುದು. ಸಂಸ್ಥೆ ಮತ್ತು ಜಿಲ್ಲಾಡಳಿತದ ನಡುವೆ ಯಾವುದೇ ಹಣಕಾಸಿನ ಸಹಭಾಗಿತ್ವ ಇಲ್ಲ’ ಎಂದರು.

ಜಿಪಿಎಸ್ ಅಳವಡಿಕೆ

ಎಲ್ಲ ದ್ವಿಚಕ್ರ ವಾಹನಗಳಲ್ಲಿ ಜಿಪಿಎಸ್ ಅಳವಡಿಸಲಾಗಿದೆ. ಒಂದುವೇಳೆ ಅಪಘಾತವಾದರೆ ಅಥವಾ ಕಳವಾದರೆ ಆ ವಾಹನವನ್ನು ಪತ್ತೆ ಹಚ್ಚಲಾಗುತ್ತದೆ. ವಾಹನ ಸವಾರರಿಗೆ ಎರಡು ಹೆಲ್ಮೆಟ್‌ಗಳನ್ನೂ ನೀಡಲಾಗುತ್ತದೆ. ತಮ್ಮ ಪ್ರಯಾಣದ ಬಳಿಕ ಅವುಗಳನ್ನು ವಾಹನದ ಸರಕು ಪೆಟ್ಟಿಗೆಯಲ್ಲಿ ಇಡಬೇಕು ಎಂದು ಶಮಂತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.