ಶಿರಸಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುದಾನ ಸದ್ಬಳಕೆಯಲ್ಲಿ ವಿಫಲವಾದ ಕಾರಣದಿಂದ ಇಲಾಖೆ ಬಿಡುಗಡೆಯಾಗಿದ್ದ ಮೊತ್ತದಲ್ಲಿ 32.24 ಲಕ್ಷ ರೂಪಾಯಿ ಮಾರ್ಚ್ ಕೊನೆಯಲ್ಲಿ ಸರ್ಕಾರಕ್ಕೆ ವಾಪಸಾಗಿದೆ.
ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾ.ಪಂ. ಸದಸ್ಯರು ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
`ಹಿಂದಿನ ತಿಂಗಳು ಆಹಾರ ಖರೀದಿ ಮಾಡಲು ಸಾಧ್ಯವಾಗದೆ ಹಣ ವಾಪಸ್ಸಾಗಿದೆ~ ಎಂದು ಪ್ರಭಾರ ಅಧಿಕಾರಿ ಕಮಲಾ ನಾಯ್ಕ ಹೇಳಿದರು.
ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸದಸ್ಯ ಸಂತೋಷ ಗೌಡ, ಅಂಗನವಾಡಿಗಳಿಗೆ ಆಹಾರ ಕೊರತೆಯಾದಲ್ಲಿ ಯಾರು ಹೊಣೆ ಎಂದು ಪ್ರಶ್ನಿಸಿದರು. ಇದಕ್ಕೆ ತಾ.ಪಂ. ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾಧಿಕಾರಿ ಹೊಣೆಗಾರರು ಎಂದು ಸದಸ್ಯ ಸುನೀಲ ನಾಯ್ಕ ಆರೋಪಿಸಿದರು. ಇಲಾಖೆ ಅಧಿಕಾರಿಗಳಿಂದ ತಪ್ಪು ಕಾರ್ಯವಾಗಿದ್ದು, ಅಧ್ಯಕ್ಷರು ಜವಾಬ್ದಾರರಲ್ಲ ಎಂದು ಆಡಳಿತ ಪಕ್ಷದ ಸದಸ್ಯ ದತ್ತಾತ್ರೇಯ ವೈದ್ಯ ಹೇಳಿದರು.
`ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ರೂ.22ಲಕ್ಷ ಅನುದಾನಕ್ಕೆ ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಿ, ತಾ.ಪಂ. ಅನುಮೋದನೆ ಪಡೆಯದೆ ಹಣ ಖರ್ಚು ಮಾಡಲಾಗಿದೆ. ತಾ.ಪಂ. ಸಭೆ ಗಮನಕ್ಕೆ ತರದೆ ಹೇಗೆ ಹಣ ಖರ್ಚು ಮಾಡಿದಿರಿ? ಕೇವಲ ಒಂದು ತಿಂಗಳ ಜೀಪ್ ಬಾಡಿಗೆ ಹಣ ರೂ.48 ಸಾವಿರವೆಂದು ತೋರಿಸಲಾಗಿದೆ~ ಎಂದು ಸಂತೋಷ ಗೌಡ ಖಾರವಾಗಿ ಹೇಳಿದರು. ಈ ಕುರಿತು ತೀವ್ರ ಚರ್ಚೆ ನಡೆದು, ಹಿಂದಿನ ವರ್ಷದ ಆಯವ್ಯಯದಲ್ಲಿ ಇಲಾಖೆಗೆ ದೊರೆತ ಅನುದಾನದಲ್ಲಿ ವೆಚ್ಚ ಮಾಡಿದ ಮೊತ್ತದ ವಿವರ ಲೆಕ್ಕಪತ್ರವನ್ನು ಇದೇ 20ರ ಒಳಗಾಗಿ ಒಪ್ಪಿಸುವಂತೆ ಸಭೆ ಸೂಚಿಸಿತು.
ಇದಕ್ಕೆ ತಪ್ಪಿದಲ್ಲಿ ಇಲಾಖೆಗೆ ತಾ.ಪಂ.ನಿಂದ ನೀಡುವ ಅನುದಾನ ತಡೆ ಹಿಡಿಯಬೇಕು ಜೊತೆಗೆ ಇಲಾಖೆ ಸಿಬ್ಬಂದಿಗಳ ಸಂಬಳ ತಡೆ ಹಿಡಿಯಬೇಕು ಎಂದು ಸಭೆ ಒಮ್ಮತದ ನಿರ್ಣಯ ಕೈಕೊಂಡಿತು.
ನೀರಿನ ಟಾಕಿ ಕೊರತೆ: ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂಬ ಆರೋಪ ರೋಗಿಗಳಿಂದ ಕೇಳಿಬರುತ್ತಿದೆ ಎಂದು ಸದಸ್ಯ ಗುರುಪಾದ ಹೆಗಡೆ ಹೇಳಿದರು. ನಿತ್ಯ ಬಳಕೆಗೆ ಸಾಕಾಗುಷ್ಟು ಸಂಗ್ರಹ ಸಾಮರ್ಥ್ಯವಿದೆ. ನಗರಸಭೆ ನೀರು ವ್ಯತ್ಯಯವಾದಲ್ಲಿ ತೊಂದರೆಯಾಗುತ್ತದೆ.
ರೋಗಿಗಳ ಸಂಖ್ಯೆ ಜಾಸ್ತಿಯಾಗಿದ್ದು, ನೀರು ಸಂಗ್ರಹಣಾ ತೊಟ್ಟಿಯ ಸಾಮರ್ಥ್ಯ ಹೆಚ್ಚಿಸಬೇಕಾಗಿದೆ ಎಂದು ಆಡಳಿತಾಧಿಕಾರಿ ಮಂಡಕ್ಕಿ ಹೇಳಿದರು. `ತಾ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ವಿನಂತಿಸೋಣ~ ಎಂದು ಗುರುಪಾದ ಹೆಗಡೆ ಹೇಳಿದರು.
ಶಾಶ್ವತ ವ್ಯವಸ್ಥೆ ಆಗುವ ತನಕ ನಗರಸಭೆ ಸಂಪರ್ಕಿಸಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವಂತೆ ಸಭೆಯಲ್ಲಿ ಚರ್ಚಿಸಲಾಯಿತು. ಈ ತಿಂಗಳು ತಾಲ್ಲೂಕಿನಲ್ಲಿ ಒಂದು ಮಲೇರಿಯಾ ಪ್ರಕರಣ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.