ಕಲೆ ಕೆಲವರಲ್ಲಿ ವಂಶಪಾರಂಪರ‌್ಯವಾಗಿ ಬಂದರೆ ಮತ್ತೆ ಕೆಲವರು ಸಾಧನೆಯಿಂದ ಅದನ್ನು ಕರಗತಮಾಡಿಕೊಂಡಿರುತ್ತಾರೆ. ಹೀಗೆ ಕಲೆಯನ್ನು ಸಿದ್ಧಿಸಿಕೊಂಡವರ ಸಾಲಿಗೆ ಸೇರುತ್ತಾರೆ ಕಾರವಾರ ತಾಲ್ಲೂಕಿನ ಕಿನ್ನರದ ಯಕ್ಷಗಾನ, ಗುಮಟೆಪಾಂಗ ಕಲಾವಿದ ಸುರೇಶ ಸಿ.ನಾಯ್ಕ.
ಕೃಷಿ ಕುಟುಂಬದಲ್ಲಿ ಜನಿಸಿದ ಸುರೇಶ ಅವರು ತಮ್ಮ 16ನೇ ವಯಸ್ಸಿನಲ್ಲಿ ಗೆಜ್ಜೆಕಟ್ಟಲು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೆ ಅವರು ಹಿಂತಿರುಗಿ ನೋಡಲೇ ಇಲ್ಲ. ಇಳಿ ವಯಸ್ಸಿನಲ್ಲೂ ನಾಯ್ಕ ಯಕ್ಷಗಾನದಲ್ಲಿ ಪಾತ್ರಗಳನ್ನು ಮಾಡುತ್ತಾರೆ. ಅನೇಕ ಹಿರಿಯ, ನುರಿತ ಕಲಾವಿದರೊಂದಿಗೆ ಅಭಿನಯಿಸಿರುವ ನಾಯ್ಕ, ರಾಮಾಯಣ, ಮಹಾಭಾರತ ಸೇರಿದಂತೆ ಪುರಾಣದ ಕಥೆಗಳನ್ನು ತಲಸ್ಪರ್ಶಿಯಾಗಿ ಅರಿತುಕೊಂಡಿದ್ದು ಪೌರಾಣಿಕ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ.
ಜನಪದ ಕಲೆ ಗುಮಟೆ ವಾದನವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿರುವ ಸುರೇಶ ಜಿಲ್ಲೆಯ ಅನೇಕ ಕಡೆಗಳಲ್ಲಿ ಕಾರ್ಯಕ್ರಮ ನೀಡಿ ಭೇಷ್ ಎನಿಸಿಕೊಂಡಿದ್ದಾರೆ. ಆಕಾಶವಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೆುಚ್ಚುಗೆ ಪಡೆದಿದ್ದಾರೆ.
ಕಿನ್ನರದ ಮಹಾದೇವ ಹವ್ಯಾಸಿ ಯಕ್ಷಗಾನ ಸಂಘದ ಅಧ್ಯಕ್ಷರಾಗಿ ಯಕ್ಷಗಾನ ಕಲೆಯ ಉಳಿವಿಗಾಗಿ ಇವರು ಪಡುತ್ತಿರುವ ಶ್ರಮ ಅಪಾರ. ಕಲಾವಿದ ಸುರೇಶ ನಾಯ್ಕ ಎಲ್ಲರಿಗೂ ಚಿರಪರಿಚಿತರು. ಆದರೆ, ಸರಕಾರ ಹಾಗೂ ಅಕಾಡೆಮಿ ವಿಷಯದಲ್ಲಿ ಚಿರಪರಿಚಿತರಾಗಿದ್ದಾರೆ. ನಾಯ್ಕ ಅವರ ಸೇವೆಯನ್ನು ಸರಕಾರ, ಸಂಘ ಸಂಸ್ಥೆಗಳು ಗುರುತಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.