ADVERTISEMENT

ಬಿಸಿಎಂ ಬಾಲಕಿಯರಿಗೆ ವಸತಿ ಸೌಲಭ್ಯ

ಪಾಳುಬಿದ್ದ ಕಟ್ಟಡಕ್ಕೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 6:34 IST
Last Updated 11 ಡಿಸೆಂಬರ್ 2013, 6:34 IST

ಶಿರಸಿ: ತಾಲ್ಲೂಕಿನ ಬಂಡಲ ಗ್ರಾಮ ಪಂಚಾಯ್ತಿ ಆವರಣದಲ್ಲಿ ಮೂರು ದಶಕಗಳಿಂದ ಪಾಳುಬಿದ್ದಿದ್ದ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದ ಕಟ್ಟಡಕ್ಕೆ ಕಾಯ ಕಲ್ಪ ನೀಡಿ ಬಿಸಿಎಂ ಬಾಲಕಿಯರ ವಸತಿ ನಿಲಯವನ್ನು ಇಲ್ಲಿ ಪ್ರಾರಂಭಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ಗೋದಾಮಿಗೆಂದು 1929ರಲ್ಲಿ ಬಂಡಲದಲ್ಲಿ ಕಟ್ಟಡವೊಂದು ತಲೆ ಎತ್ತಿತ್ತು.

ಆರಂಭದಲ್ಲಿ ಕಟ್ಟಡ ಸದ್ಬಳಕೆ ಯಾಗಿದ್ದರೂ ನಂತರದ ವರ್ಷಗಳಲ್ಲಿ ಇದು ನಿರುಪಯುಕ್ತವಾಗಿತ್ತು. ಪ್ರಸ್ತುತ ಈ ಕಟ್ಟಡಕ್ಕೆ ಜೀವಕಳೆ ಬಂದಿದೆ. ₨ 5 ಲಕ್ಷ ವೆಚ್ಚದಲ್ಲಿ ಇದನ್ನು ನವೀಕರಣಗೊಳಿಸಿ, ಹಿಂಭಾಗದಲ್ಲಿ ಅಡುಗೆಕೋಣೆ, ಊಟದ ಕೋಣೆ, ಶೌಚಾಲಯ ನಿರ್ಮಿಸಲಾಗಿದೆ. ಬಂಡಲ ಶಾಲೆಗೆ ಬರುವ 5ರಿಂದ 10ನೇ ತರಗತಿ ವರೆಗಿನ 42 ಬಾಲಕಿಯರಿಗೆ ಇಲ್ಲಿ ವಸತಿಗೆ ಅವಕಾಶ ಒದಗಿಸಲಾಗಿದೆ. ಈ ವಸತಿನಿಲಯವನ್ನು ಶಾಸಕ ವಿಶ್ವೇಶ್ವರ ಹೆಗಡೆ ಮಂಗಳವಾರ ಉದ್ಘಾಟಿಸಿದರು.

ಇ–ಗೋಡೆಯಲ್ಲಿ ಮಾಹಿತಿ: ತಾಲ್ಲೂಕಿನಲ್ಲಿ ಪ್ರಥಮವಾಗಿ ಬಂಡಲ ಗ್ರಾಮ ಪಂಚಾಯ್ತಿಯಲ್ಲಿ ಇ–ಗೋಡೆ ಸೌಲಭ್ಯ ಪ್ರಾರಂಭಿಸಲಾಗಿದೆ. ಸರ್ಕಾರಿ ಯೋಜನೆಗಳ ವಿವರ, ಫಲಾನುಭವಿಗಳ ಆಯ್ಕೆ ಪಟ್ಟಿ, ನರೇಗಾ ಕಾಮಗಾರಿ ಕುರಿತ ಎಲ್ಲ ರೀತಿಯ ವಿವರಗಳನ್ನು ಸಾರ್ವಜನಿಕರು ಕಂಪ್ಯೂಟರ್‌ ಪರದೆಯ ಮೇಲೆ ವೀಕ್ಷಿಸಬಹುದು. ₨ 50,000 ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.

ಬಂಡಲ ಸರ್ಕಾರಿ ಪ್ರೌಢಶಾಲೆಯಲ್ಲಿ ₨ 10,000 ವೆಚ್ಚದಲ್ಲಿ ಸ್ವಾಮಿ ವಿವೇಕಾನಂದ ಸಭಾಭವನ ನಿರ್ಮಿಸ ಲಾಗಿದೆ. ಇ–ಗೋಡೆ ಸೌಲಭ್ಯ ಹಾಗೂ ಸಭಾಭವನವನ್ನು ಶಾಸಕರು ಉದ್ಘಾಟಿಸಿ ದರು. ಈ ಸಂದರ್ಭದಲ್ಲಿ ಅವರು ಬಡಗಿಯಲ್ಲಿ ನಿರ್ಮಿಸಲಿರುವ ₨ 10.5 ಲಕ್ಷ ವೆಚ್ಚದ ಸಭಾಭವನ, ₨ 20 ಲಕ್ಷ ಮೊತ್ತದ ಖೂರ್ಸೆ ಗ್ರಾಮದ ಕುಡಿ ಯುವ ನೀರು ಸರಬರಾಜು ಯೋಜನೆಗೆ ಗುದ್ದಲಿಪೂಜೆ ನೆರವೇರಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಗುರುಪಾದ ಹೆಗಡೆ, ಉಪಾಧ್ಯಕ್ಷ ಸಂತೋಷ ಗೌಡರ್‌, ಜಿಲ್ಲಾ ಪಂಚಾಯ್ತಿ ಸದಸ್ಯ ಆರ್‌.ಡಿ. ಹೆಗಡೆ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ಯಾಮಲಾ ಭಟ್ಟ, ಉಪಾಧ್ಯಕ್ಷ ನಾರಾಯಣ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್‌.ಹೆಗಡೆ, ತಾಲ್ಲೂಕು ಪಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಚಿಕ್ಕಮಠ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.