ADVERTISEMENT

ಬೆಳೆ ವಿಮೆ: ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 8:05 IST
Last Updated 11 ಏಪ್ರಿಲ್ 2012, 8:05 IST

ಮುಂಡಗೋಡ: ಬೆಳೆ ವಿಮೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ತಾಲ್ಲೂಕಿನ ರೈತರ ಸಮಸ್ಯೆ ಬಗೆಹರಿಸುವಂತೆ ಈ ಹಿಂದೆ ಮನವಿ ಮಾಡಿದ್ದರೂ ರಾಜ್ಯ ಸರ್ಕಾರ ಈವರೆಗೆ ಸ್ಪಂದಿಸಿಲ್ಲ. ಕೊಳವೆ ಬಾವಿಯನ್ನು ಅವಲಂಬಿಸಿರುವ ಕೆಲ ರೈತರು ಬೆಳೆ ಬೆಳೆಯಬೇಕೆಂದರೂ ವಿದ್ಯುತ್ ಕಡಿತದಿಂದ ಅದು ಸಾಧ್ಯವಾಗುತ್ತಿಲ್ಲ. ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಕುಡಿಯುವ ನೀರು ಸಮರ್ಪಕವಾಗಿ ಪೊರೈಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು  ಪ್ರತಿಭಟನಾಕಾರರು ದೂರಿದರು.

ಕಾಂಗ್ರೆಸ್ ಸಮಿತಿ ಸದಸ್ಯರು ಕಳೆದ 30-40 ವರ್ಷಗಳಿಂದ ಅತಿಕ್ರಮಣ ಸಾಗುವಳಿ ಮಾಡುತ್ತಿರುವ ರೈತರ ಜಮೀನುಗಳಿಗೆ ಅರಣ್ಯ ಇಲಾಖೆಯವರು ಅಗಳವನ್ನು ಹೊಡೆದು ರೈತರನ್ನು ಹೊರದಬ್ಬಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಹಲವು ಸಲ ಒತ್ತಾಯಿಸಿದರೂ ಖುರ್ಚಿ ಆಸೆಗಾಗಿ ಹಪಹಪಿಸುತ್ತ ರಾಜ್ಯ ಬಿ.ಜೆ.ಪಿ ಸರ್ಕಾರ ಆಂತರಿಕ ಕಲಹದಲ್ಲಿ ಮುಳುಗಿದೆ. ರೈತರ ಬವಣೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ, ಬಿ.ಎಫ್.ಬೆಂಡಿಗೇರಿ, ಕೆ.ಆರ್.ಬಾಳೆಕಾಯಿ, ಕೆ.ಬಿ.ಕೊಳ್ಳಾನವರ, ಎಲ್.ಟಿ.ಪಾಟೀಲ, ರಾಮಣ್ಣ ಪಾಲೇಕರ, ರಫೀಕ್ ಇನಾಂದಾರ, ವೀರಭದ್ರ ಶೇರಖಾನೆ, ಸರೋಜಾ ಹೇಂದ್ರೆ, ಶಾರದಾಬಾಯಿ ರಾಠೋಡ, ಎಚ್.ಎಂ.ನಾಯ್ಕ, ಇಮ್ತಿಯಾಜ್ ನಾಕೆವಾಲೆ ಮತ್ತಿತರರು  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.