ADVERTISEMENT

ಬ್ಯಾರೇಜ್‌ನಲ್ಲಿ ರಂಧ್ರ : ನೀರು ಪೋಲು

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 10:05 IST
Last Updated 20 ಜೂನ್ 2013, 10:05 IST

ಮುಂಡಗೋಡ: ತಾಲ್ಲೂಕಿನ ಶಿಡ್ಲಗುಂಡಿ ಸನಿಹದ ಬೇಡ್ತಿ ಹಳ್ಳಕ್ಕೆ ಕಟ್ಟಲಾಗಿರುವ ಬ್ಯಾರೇಜ್ ಕಾಮಗಾರಿ ಕಳಪೆಯಾಗಿದ್ದು ಅಸಮರ್ಪಕ  ಕಾಮಗಾರಿಯಿಂದ ಕಾಂಕ್ರಿಟ ಗೋಡೆಯ ಕೆಳಭಾಗದಲ್ಲಿ ರಂಧ್ರ ಬಿದ್ದು ನೀರು ಸೋರಿಕೆಯಾಗುತ್ತಿದೆ. ಅಲ್ಲದೇ ಇದರಿಂದ ಒಂದು ಬದಿಯ ದಂಡೆ ಕುಸಿಯುವ ಸಂಭವವಿದೆ ಎಂದು ಅಲ್ಲಿನ ರೈತರು ದೂರಿದ್ದಾರೆ.

`2010-11ರಲ್ಲಿ ಶಾಸಕರ ಅನುದಾನದಡಿ ಸುಮಾರು 25ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಬ್ಯಾರೇಜ್ ಕಾಮಗಾರಿಯಿಂದ ರೈತರಿಗೆ ಅನುಕೂಲವಾಗುವ ಬದಲು ಕಳಪೆ ಕಾಮಗಾರಿಯಿಂದ ನೀರು ಸೋರಿಕೆಯಾಗುತ್ತಿದೆ. ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಬೆಳೆ ಬೆಳೆಯಲು ಅನುಕೂಲವಾಗುವ ದೃಷ್ಟಿಯಿಂದ ನಿರ್ಮಿಸಲಾಗಿರುವ ಈ ಬ್ಯಾರೇಜ್ 300 ರೈತರ ಹೊಲಗದ್ದೆಗಳಿಗೆ ನೀರುಣಿಸುತ್ತದೆ. ಆದರೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಹಳ್ಳದಲ್ಲಿ ಸಂಗ್ರಹಗೊಂಡಿದ್ದ ನೀರನ್ನು ಖಾಲಿ ಮಾಡಿ ಸತತ ಎರಡು ವರ್ಷಗಳಿಂದ  ಕಾಮಗಾರಿ ನಡೆಸಿದ್ದು ಈಗಷ್ಟೇ ಮುಗಿದಿದೆ. ಅಷ್ಟರಲ್ಲಿಯೇ ಒಂದು ಬದಿಯ ಕಾಂಕ್ರಿಟ ಗೋಡೆಯ ರಂಧ್ರದ ಮೂಲಕ ನೀರು ಹೊರಹೋಗುತ್ತಿದೆ. ಮಳೆಗಾಲ ಮುಗಿಯುವುದರೊಳಗೆ ಶೇ 75ರಷ್ಟು ನೀರು ಖಾಲಿಯಾಗಿ ಪಕ್ಕದ ದಂಡೆಯೂ ಕುಸಿಯುವ ಸಂಭವವಿದೆ' ಎಂದು ರೈತ ಸುಬ್ರಾಯ ದೂರಿದರು.

`ಕಾಮಗಾರಿ ಪ್ರಾರಂಭದಲ್ಲಿಯೇ ಇಲ್ಲಿನ ರೈತರು ಕಳಪೆಯಾಗುತ್ತಿದೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ದೂರಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ' ಎಂದರು. ಕಳೆದ 15ದಿನಗಳಿಂದ ಮಳೆ ಬೀಳುತ್ತಿದ್ದು ಸಾಕಷ್ಟು ನೀರು ಸಂಗ್ರಹವಾಗಿದೆ. ಆದರೆ ಬೇಸಿಗೆ ಬೆಳೆ ಬೆಳೆಯಲು ಈ ನೀರು ಬಳಕೆಯಾಗುತ್ತದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದ್ದು ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿರುವದರಿಂದ ಬೇಸಿಗೆಯಲ್ಲಿ ನೀರು ಸಿಗಲಿಲ್ಲ. ಒಂದು ಬದಿಯ ಗೋಡೆಯಲ್ಲಿ ದೊಡ್ಡದಾದ ರಂಧ್ರಗಳು ಕಾಣಿಸಿಕೊಂಡಿದ್ದು ಪಕ್ಕದ ದಂಡೆಗೂ ಅಪಾಯವಾಗಲಿದೆ ಎಂಬ ಆತಂಕ ರೈತರದ್ದಾಗಿದೆ.

`ಬ್ಯಾರೇಜ್  ಕಾಮಗಾರಿಯಲ್ಲಿ ರಂಧ್ರ ಬಿದ್ದು ನೀರು ಸೋರಿಕೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ನಾಳೆ ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತೇನೆ' ಎಂದು ಜಿ.ಪಂ.ವಿಭಾಗದ ಎಂಜಿನಿಯರ್ ಆರ್.ಎಚ್.ಕುಲಕರ್ಣಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.