ADVERTISEMENT

ಭಟ್ಕಳದಲ್ಲಿ ಮಳೆಯ ಮೊದಲ ಸಿಂಚನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 8:45 IST
Last Updated 19 ಏಪ್ರಿಲ್ 2012, 8:45 IST

ಭಟ್ಕಳ: ಬುಧವಾರ ಸಂಜೆ 6.30ರ ಸುಮಾರಿಗೆ ಠಪಠಪ ಎಂದು ಸುಮಾರು 15 ನಿಮಿಷಗಳ ಕಾಲ ಸುರಿದ ಬೇಸಿಗೆಯ ಮೊದಲ ಮಳೆಯ ಹನಿಗಳು ಕೆಲವು ಕಾಲ ತಂಪಿನ ವಾತಾವರಣ ಮೂಡಿಸಿತು.

ಸಖೆಯಿಂದ ಬೆವರು ಸುರಿಸುತ್ತಿರುವುದರ ಜತೆಗೆ ನೀರಿಗಾಗಿ ಪರದಾಡುತ್ತಿರುವ ಭಟ್ಕಳದ ಜನರು ಬುಧವಾರ ಸಂಜೆ ಮೋಡ ಕವಿದ ವಾತಾವರಣ ಕಂಡು ಇವತ್ತು ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದು ತಂಪಿನ ಜತೆಗೆ ನೀರಿನ ಬವಣೆಯನ್ನೂ ನೀಗಿಸಬಹುದು ಎಂದು ಕೊಂಡವರಿಗೆ ಕಾದಿದ್ದು ನಿರಾಸೆ ಮಾತ್ರ. ಕೇವಲ 15ನಿಮಿಷಗಳವರೆಗೆ ಸುರಿದ ಮಳೆ ಇನ್ನಷ್ಟು ಸೆಖೆಯನ್ನು ಸೃಷ್ಟಿಸಿ ಮಾಯವಾಯಿತು. ಈ ರೀತಿಯ ಮಳೆಯು ತಳಕಂಡಿರುವ ಬಾವಿಯಲ್ಲಿ ಅಳಿದುಳಿದ ನೀರನ್ನು ಇಂಗಿಸುತ್ತದೆ ಎಂದು ಹಿರಿಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಮೂರ‌್ನಾಲ್ಕು ದಿನಗಳಿಂದ ಸಂಜೆಯಾದೊಡನೆ ಮೋಡ ಕವಿದ ವಾತಾವರಣ, ಸಣ್ಣಗೆ ಗುಡುಗು, ಮಿಂಚು ಕಂಡುಬರುತ್ತಿದ್ದರೂ ಮಳೆ ಮಾತ್ರ ಬಂದಿರಲಿಲ್ಲ. ಬುಧವಾರ ಸಂಜೆ 15 ನಿಮಿಷ ಮಳೆ ಸುರಿದ ನಂತರವೂ ಗಾಳಿ ಬೀಸುತ್ತಿತ್ತು. ಇಷ್ಟು ಸಣ್ಣ ಮಳೆಗೆ 6ಗಂಟೆಗೆ ಹೋದ ರಾತ್ರಿಯಾದರೂ ಬಂದಿರಲಿಲ್ಲ.

ಶಿರಸಿ: ನಗರದಲ್ಲಿ ಬುಧವಾರ ಸಂಜೆ ಎರಡು ತಾಸು ಕಾಲ ನಿರಂತರ ಮಳೆ ಸುರಿದು ಸಂಚಾರ ಅಸ್ತವ್ಯಸ್ತಗೊಂಡಿತು.

ಎರಡು ದಿನಗಳಿಂದ ಹಗಲಿನಲ್ಲಿ ವಿಪರೀತ ಧಗೆ ಇದ್ದರೆ ಸಂಜೆ ವೇಳೆ ಆಗುತ್ತಿದ್ದಂತೆ ಮೋಡ ಕಟ್ಟಿದ ವಾತಾವರಣ ನಿರ್ಮಾಣವಾಗಿ ಮಳೆ ಸುರಿಯಿತು. ಮಂಗಳವಾರ ಸಂಜೆ ಮಳೆಯ ವಾತಾವರಣ ಸೃಷ್ಠಿಯಾದರೂ ಗಾಳಿಯ ಪ್ರಮಾಣ ಕಡಿಮೆ ಇದ್ದುದರಿಂದ ಮಳೆ ಸುರಿಯುವ ಮುನ್ನವೇ ಮೋಡ ಮರೆಯಾಯಿತು.
 
ಆದರೆ ಬುಧವಾರ ಸಂಜೆ ಒಂದೇಸವನೆ ಸುರಿದ ಮಳೆಗೆ ರಸ್ತೆ ಮೇಲೆ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಯಿತು. ಗುಡುಗು ಸಹಿತ ಮಳೆ ಇದ್ದರೂ ಗಾಳಿಯ ಪ್ರಮಾಣ ಕಡಿಮೆ ಇದ್ದುದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಮಳೆ ಆರಂಭವಾಗುತ್ತಿದ್ದಂತೆ ಕೈಕೊಟ್ಟ ವಿದ್ಯುತ್ ಎರಡು ತಾಸಿನ ತನಕವೂ ನಾಪತ್ತೆಯಾಗಿತ್ತು.

ಸಿದ್ದಾಪುರ: ಪಟ್ಟಣದಲ್ಲಿ ಬುಧವಾರ ಸಂಜೆ ಕೂಡ ಗುಡುಗು ಸಿಡಿಲಿನಿಂದ ಕೂಡಿದ ಮಳೆ ಅರ್ಧಗಂಟೆಗೂ ಹೆಚ್ಚು ಕಾಲ ಸುರಿಯಿತು. ಮಳೆಯ ರಭಸ ಮಂಗಳವಾರದಷ್ಟು ಇರದಿದ್ದರೂ, ರಸ್ತೆ ಗಟಾರಗಳು ತುಂಬುವಷ್ಟಿತ್ತು. ಇದರೊಂದಿಗೆ ವಿದ್ಯುತ್ ವಿತರಣೆ ಕೂಡ ಸ್ಥಗಿತಗೊಂಡಿದ್ದರಿಂದ ಜನರು ಪರದಾಡುವಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.