ADVERTISEMENT

ಭವಿಷ್ಯ ಕೇಳಿ ಹಣಕೊಟ್ಟರು; ಮರಳಿ ಪಡೆದರು!

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 11:00 IST
Last Updated 7 ಏಪ್ರಿಲ್ 2012, 11:00 IST
ಭವಿಷ್ಯ ಕೇಳಿ ಹಣಕೊಟ್ಟರು; ಮರಳಿ ಪಡೆದರು!
ಭವಿಷ್ಯ ಕೇಳಿ ಹಣಕೊಟ್ಟರು; ಮರಳಿ ಪಡೆದರು!   

ಕಾರವಾರ: ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇದು ಪ್ರಜ್ಞಾವಂತರೇ ಮೋಸ ಹೋದ ಕಥೆ. ಯಾರೋ ಹೇಳಿದ ಭವಿಷ್ಯವನ್ನು ನಂಬಿ, ಅದು ಹನುಮ ಜಯಂತಿ ಆಗಿದ್ದರಿಂದ ಭವಿಷ್ಯ ಖಂಡಿತವಾಗಿ ನಿಜವಾಗಲಿದೆ ಎಂದು ಸಂತಸಗೊಂಡು ಅದನ್ನೇ ಸತ್ಯವೆಂದು ನಂಬಿ, ಅವರಿಗೆ ಸಾವಿರಗಟ್ಟಲೆ ಹಣ ನೀಡಿ ವಂಚನೆಗಳೊಳಗಾಗಿ ನಂತರ ಪಶ್ಚಾತ್ತಾಪಪಟ್ಟ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.

ಘಟನೆಯ ವಿವರ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಆಸ್ಥಿ ತಾಲ್ಲೂಕಿನ ಬಾಹು ಕಾನಡೆ, ಹನುಮಂತ ವಾಕುರೆ, ದೇವಾನಜಿ ಮತ್ತು ರವಿ ದಳವಿ ಇವರು ಗಜಗಾತ್ರದ ನಂದಿಯೊಂದಿಗೆ ಶುಕ್ರವಾರ ನಗರಕ್ಕೆ ಆಗಮಿಸಿದ್ದರು.
 ಈ ನಂದಿಯನ್ನು ನೋಡಿದ ಜನ ಕ್ಷಣಕಾಲ ಅವಕ್ಕಾದರು. ಅಬ್ಬಾ ಎಂದು ಉದ್ಘಾರ ತೆಗೆದರು. ಬಸ್ ನಿಲ್ದಾಣದಲ್ಲಿ ನಿಂತ ನಂದಿಯನ್ನು ನೋಡಿದ ವಿದೇಶಿ ಪ್ರವಾಸಿಗರು ಹತ್ತಾರು ಫೋಟೊ ಕ್ಲಿಕ್ಕಿಸಿಕೊಂಡರು. ವ್ಹಾವ್ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡರು.

ನಂದಿಯ ಗಾತ್ರ, ಕೊಂಬು ಎಲ್ಲರನ್ನೂ ಆಕರ್ಷಿಸುತ್ತಿತ್ತು. ನಂದಿಯನ್ನು ನೋಡಿ ಮಕ್ಕಳು ಅದರೆ ಹಿಂದೆಯೇ ಸಾಗುತ್ತಿದ್ದರು. ಆಶ್ಚರ್ಯವೆಂದರೆ ಆಸ್ಥಿ ತಾಲ್ಲೂಕಿನ ನಾಲ್ವರು ನಂದಿಯನ್ನು ಜೊತೆಯಲ್ಲಿಟ್ಟುಕೊಂಡು ಮನೆಮನೆಗೆ ಹೋಗಿ ಭವಿಷ್ಯ ಹೇಳಿ ಅದಕ್ಕೆ ಪ್ರತಿಯಾಗಿ ಹಣ ಪಡೆಯುತ್ತಿದ್ದರು.

ಹೀಗೆ ಭವಿಷ್ಯ ಹೇಳಲು ಬಂದವರು ಮೊದಲು ನಗರದ ಬಸ್ ನಿಲ್ದಾಣದ ಸಮೀಪದ ಬ್ರಾಹ್ಮಣಗಲ್ಲಿಯಿಂದ ತಮ್ಮ ಕಾಯಕ ಆರಂಭಿಸಿದರು. ಬಹುತೇಕ ವಿದ್ಯಾವಂತರಿಂದ ಕೂಡಿದ ಗಲ್ಲಿಯಲ್ಲಿ ಅನೇಕರು ಇವರಿಂದ ಭವಿಷ್ಯ ಕೇಳಿದರು. ಅವರು ಹೇಳಿದ ಭವಿಷ್ಯ ಕೇಳಿ ಸಂತಸಗೊಂಡ ನಿವಾಸಿಗಳು ಒಂದು, ಎರಡು, ಮೂರು ಹೀಗೆ ಹದಿನೇಳು ಸಾವಿರದ ವರೆಗೂ ಹಣ ನೀಡಿದರು.

ಆದರೆ, ಭವಿಷ್ಯ ಕೇಳಿಸಿಕೊಂಡವರ ಮನಸ್ಥಿತಿ ಕೆಲವೇ ಗಂಟೆಯಲ್ಲಿ ಬದಲಾಗಿತ್ತು. ಸುಖಸುಮ್ಮನೆ ಸಾವಿರಗಟ್ಟಲೆ ಹಣ ಕೊಟ್ಟೆವಲ್ಲ ಎಂಬ ಗೊಂದಲ, ಗಲಿಬಿಲಿಗೆ ಒಳಗಾದರು. ತಕ್ಷಣ ಪೊಲೀಸ್ ಠಾಣೆಗೆ ದೌಡಾಯಿಸಿ ವಿಷಯ ತಿಳಿಸಿದರು.

ಪೊಲೀಸರು ಈ ನಾಲ್ವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿ ಅವರಿಂದ ತಪ್ಪೊಪ್ಪಿಗೆಯನ್ನು ಬರೆದುಕೊಂಡು ಯಾರ‌್ಯಾರಿಂದ ಎಷ್ಟೆಷ್ಟು ಹಣ ಪಡೆದಿದ್ದರೋ ಅದನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ಮರಳಿಸಿದರು. ರಾತ್ರಿಯವರೆಗೆ ಅವರು ಪೊಲೀಸ್ ವಶದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.