ಹಳಿಯಾಳ: ‘ಇಂದಿನ ಮಕ್ಕಳು ರಾಷ್ಟ್ರದ ಆಸ್ತಿ. ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ’ ಎಂದು ಶ್ರವಣಬೆಳ ಗೊಳದ ಮುನಿಶ್ರೀ ಪುಣ್ಯ ಸಾಗರ ಸಲಹೆ ನೀಡಿದರು.
ತಾಲ್ಲೂಕಿನ ಹವಗಿಯಲ್ಲಿ ನಡೆಯುತ್ತಿರುವ ಜಿನ ಮಂದಿರದ ಶಿಖರೋಪರಿ ಹಾಗೂ 1008 ಪಾರ್ಶ್ವನಾಥ ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾನ ಮಹೋತ್ಸವದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ಪಾಲಕರು ದೃಶ್ಯ ಮಾಧ್ಯಮ (ಟಿವಿ)ದಲ್ಲಿ ಬಿತ್ತರಿಸುವ ಮನರಂಜನೆ ಕಾರ್ಯಕ್ರಮ ವೀಕ್ಷಣೆ ಮಾಡುವಾಗ ಉತ್ತಮ ಸಂಸ್ಕಾರಯುತ ಕಾರ್ಯಕ್ರಮಗಳನ್ನು ಮಕ್ಕಳ ಭವಿಷ್ಯದ ವಿಚಾರದೊಂದಿಗೆ ವೀಕ್ಷಣೆ ಮಾಡಿ. ದೃಶ್ಯ ಮಾಧ್ಯಮಗಳನ್ನು ವೀಕ್ಷಣೆ ಮಾಡಲು ನಿಗದಿತ ಸಮಯವನ್ನು ಮೀಸಲಿಡಿ. ಉತ್ತಮ ಗ್ರಂಥ, ಪುಸ್ತಕಗಳನ್ನು ವಾಚನ ಮಾಡಿ, ಜೀವನದಲ್ಲಿಯ ಆಗುಹೋಗುಗಳ ಹಾಗೂ ಧರ್ಮಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಮಾನವನಾಗಿ ಮಾನವೀಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ’ ಎಂದರು.
ಇದೇ ಸಂದರ್ಭದಲ್ಲಿ 121 ಬಾಲಕರ ಉಪನಯನ ಕಾರ್ಯಕ್ರಮವನ್ನು ನಡೆಸಲಾಯಿತು. ಕೊಲ್ಹಾಪುರದ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು ಉಪನಯನದ ವಿಧಿವಿಧಾನವನ್ನು ನಡೆಸಿಕೊಟ್ಟರು. ಸೋಂದಾ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಭಾನುವಾರ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ದೀಕ್ಷಾಕಲ್ಯಾಣ ಕಾರ್ಯಕ್ರಮ ನಡೆಸಲಾಯಿತು. ಪ್ರಾತಃಕಾಲ, ಆನೆಮೇಲೆರಿ ಯಜಮಾನರ ಆಗಮನ ಹಾಗೂ ನಿತ್ಯ ವಿಧಿ, ಮಂಗಲಕುಂಭ ಮೌಂಜಿ ಬಂಧನ ನಡೆಯಿತು.ಮಧ್ಯಾಹ್ನ ಮುನಿಶ್ರೀ ಭಟ್ಟಾರಕರಿಂದ ಮಂಗಲ ಪ್ರವಚನ, ರಾಜ್ಯಾಭಿ ಷೇಕ,ರಾಜ್ಯ ವೈಭವ, 56ದೇಶದ ರಾಜರಿಂದ ಕಪ್ಪಕಾಣಿಕೆ ಸಮರ್ಪಣೆ ರಾಜದರ್ಬಾರ, ನೃತ್ಯ, ವೈರಾಗ್ಯ ಭಾವನಾ, ದೀಕ್ಷಾ ಕಲ್ಯಾಣ ಮಹೋತ್ಸವ, ಜಿನವಾಣಿ ಮೆರವಣಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸೋಮವಾರ ಕೇವಲ ಜ್ಞಾನ ಕಲ್ಯಾಣ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.