ADVERTISEMENT

ಮದ್ಯಕ್ಕಾಗಿ ಸಾಲು ನಿಂತ ಪಾನಪ್ರಿಯರು

ಚುನಾವಣಾ ನೀತಿ ಸಂಹಿತೆ ಪರಿಣಾಮ

​ಪ್ರಜಾವಾಣಿ ವಾರ್ತೆ
Published 5 ಮೇ 2018, 12:39 IST
Last Updated 5 ಮೇ 2018, 12:39 IST
ಮದ್ಯ ಖರೀದಿಸಲು ಯಲ್ಲಾಪುರ ಪಟ್ಟಣದ ವೈನ್ ಶಾಪ್ ಎದುರು ಸರತಿ ಸಾಲಿನಲ್ಲಿ ನಿಂತಿರುವ ಪಾನಪ್ರಿಯರು
ಮದ್ಯ ಖರೀದಿಸಲು ಯಲ್ಲಾಪುರ ಪಟ್ಟಣದ ವೈನ್ ಶಾಪ್ ಎದುರು ಸರತಿ ಸಾಲಿನಲ್ಲಿ ನಿಂತಿರುವ ಪಾನಪ್ರಿಯರು   

ಯಲ್ಲಾಪುರ : ಕುಡಿವ ನೀರಿಗಾಗಿ ಜನರು ಸರದಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯ. ಆದರೆ ಬೀರು, ಬ್ರಾಂದಿಗಾಗಿ ನಿಲ್ಲುವುದು ಬಹಳ ವಿರಳ.

ಪಟ್ಟಣದಲ್ಲಿ ಕದ್ದು ಮುಚ್ಚಿ ಮದ್ಯ ಕುಡಿದು ಹೋಗುವವರೇ ಹೆಚ್ಚು‌.ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪಾನಪ್ರಿಯರು ಮದ್ಯದಂಗಡಿಗಳ ಮುಂದೆ ಸಾಲಾಗಿ ನಿಂತು ಮದ್ಯ ಖರೀದಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ.

ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಅನೇಕ ಮದ್ಯದಂಗಡಿಗಳು ಬಂದ್ ಆಗಿರುವುದರಿಂದ ಸರ್ಕಾರಿ ಸ್ವಾಮ್ಯದ ಎಂ.ಎಸ್.ಐ.ಎಲ್ ಮಳಿಗೆ ಬಿಟ್ಟರೆ ಬೇರೆಲ್ಲೂ ಹೆಚ್ಚು ಅಂಗಡಿಗಳಿಲ್ಲ. ಹಾಗಾಗಿ ಇರುವ ಒಂದೆರಡು ಅಂಗಡಿಗಳ ಮುಂದೆ ಜನರು ಸರದಿಯಲ್ಲಿ ನಿಂತ ಮದ್ಯ ಖರೀದಿಸುತ್ತಿದ್ದಾರೆ.

ADVERTISEMENT

ಪಟ್ಟಣದಲ್ಲಿ ಒಂದು ಬಾರ್ ಮತ್ತು ಆರು ವೈನ್‌ಶಾಪ್‌ಗಳಲ್ಲಿ ಹೆಚ್ಚು ಮದ್ಯ ಮಾರಾಟ ಆಗುತ್ತಿತ್ತು. ಆದರೆ, ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ವೈನ್‌ಶಾಪ್‌ಗಳನ್ನು ಮುಚ್ಚಲಾಗಿದೆ. ಬಾರ್ ಕೂಡ ಸ್ಥಳಾಂತರದ ಗೊಂದಲದಲ್ಲಿದೆ. ಇದರಿಂದಾಗಿ ಎಂಎಸ್‌ಐಎಲ್‌ನಲ್ಲಿ ಮದ್ಯ ಖರೀದಿಸಲು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸರತಿಯಲ್ಲಿ ನಿಲ್ಲಬೇಕು. ಇನ್ನೂ ಬಯಸಿದ ಬ್ರಾಂಡ್‌ಗಳು ಸಿಗುವುದಿಲ್ಲ. ಒಬ್ಬ ಗ್ರಾಹಕರಿಗೆ ಎರಡಕ್ಕಿಂತ ಹೆಚ್ಚು ಬಾಟಲ್ ಮದ್ಯವನ್ನು ನೀಡಲಾಗುತ್ತಿಲ್ಲ. ಸರ್ಕಾರಿ ನಿಯಮಾವಳಿ ಪ್ರಕಾರ ಅಗತ್ಯಕ್ಕಿಂತ ಹೆಚ್ಚಿನ ದಾಸ್ತಾನು ತರಲೂ ಸಾಧ್ಯವಾಗುತ್ತಿಲ್ಲ ಎಂಬುದು ಮಳಿಗೆ ಸಿಬ್ಬಂದಿಯ ಮಾತು.

ಮದ್ಯ ಖರೀದಿಸಲು ಬರುವ ಕೆಲವರು ಮುಖಕ್ಕೆ ಹೆಲ್ಮೆಟ್ ಧರಿಸಿ,  ಇಲ್ಲವೇ ಟವೆಲ್‌ ಸುತ್ತಿಕೊಂಡು ಮದ್ಯದಂಗಡಿ ಎದುರು ಸರದಿಯಲ್ಲಿ ನಿಲ್ಲುತ್ತಿರುವುದು ಕಂಡು ಬರುತ್ತಿದೆ.

ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಮದ್ಯದಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.
‘ಚುನಾವಣೆ ಘೋಷಣೆ ಪೂರ್ವದಲ್ಲಿ ಪಟ್ಟಣ ವ್ಯಾಪ್ತಿಯ 7ರಿಂದ 8 ಹೊಟೇಲ್ ಮತ್ತು ಡಾಬಾಗಳಲ್ಲಿ ಮುಕ್ತವಾಗಿ ಮದ್ಯ ಮಾರಾಟವಾಗುತ್ತಿತ್ತು. ಈಗ ನೀತಿ ಸಂಹಿತೆ ಜಾರಿಯಾದ ನಂತರ ಹೊಟೇಲ್ ಮತ್ತು ಡಾಬಾಗಳಲ್ಲಿ ಮದ್ಯ ಮಾರಾಟ ನಿಲ್ಲಿಸಲಾಗಿದೆ. ವಿಧಿಯಿಲ್ಲದೇ ಸರದಿಯಲ್ಲಿ ನಿಂತು ಮದ್ಯ ಖರೀದಿಸಬೇಕಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಹಕರೊಬ್ಬರು ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.