ADVERTISEMENT

ಮನೆ ಸೇರಿದ ಯಾತ್ರಾರ್ಥಿಗಳು

ಮನೆಮಂದಿಯನ್ನು ಕಣ್ತುಂಬಿಕೊಂಡರು...

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 6:21 IST
Last Updated 24 ಜೂನ್ 2013, 6:21 IST

ಕಾರವಾರ: ಚಾರ್‌ಧಾಮ್ ಯಾತ್ರೆಗೆ ಹೋಗಿ ಪ್ರವಾಹದಲ್ಲಿ ಸಿಕ್ಕು ಬದುಕಿದ ಹೊನ್ನಾವರ ತಾಲ್ಲೂಕಿನ ಒಂಬತ್ತು ಯಾತ್ರಾರ್ಥಿಗಳು ಭಾನುವಾರ ತವರಿಗೆ ಮರಳಿದರು. ದೆಹಲಿಯಿಂದ ರೈಲಿನಲ್ಲಿ ಗೋವಾಕ್ಕೆ ಆಗಮಿಸಿದ ಯಾತ್ರಾರ್ಥಿಗಳನ್ನು ಹೊನ್ನಾವರ ಸತ್ಯಸಾಯಿ ಸೇವಾ ಸಮಿತಿಯ ಸದಸ್ಯರು ಬರಮಾಡಿಕೊಂಡರು.

ವಿ.ಡಿ.ಮೊಗೇರ, ಜಗದೀಶ ಪಾಂಡುರಂಗ ಮೇಸ್ತ, ಕೃಷ್ಣಕುಮಾರ ಲಕ್ಷ್ಮಣ ಶೆಟ್, ಪ್ರಹ್ಲಾದ್ ವಿಠ್ಠಲ ಭಟ್, ಕೃಷ್ಣ ಪರಮೇಶ್ವರ ಮಿರಾಶಿ, ತಿಮ್ಮಯ್ಯ ಪರಮೇಶ್ವರ ಮಿರಾಶಿ, ರಾಘವೇಂದ್ರ ಸುರೇಶ ಭಟ್, ನಿತೀನ್ ರಾಮದಾಸ ಶೇಟ್, ಸೂರಜ್ ಶಾನಭಾಗ ಅವರ ಮೊಗದಲ್ಲಿ ಸಂತಸ ಮನೆಮಾಡಿತ್ತು.

ಊರು ತಲುಪುವ ಮುನ್ನ ನಗರದ ಕೋಡಿಬಾಗದಲ್ಲಿ ಎದುರಾದ ಸುದ್ದಿಗಾರರೊಂದಿಗೆ ಯಾತ್ರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.

`ನಾವು ಮಡಗಾಂವ ಮೂಲಕ ದೆಹಲಿಗೆ ಹೋಗಿ ಅಲ್ಲಿಂದ ಜೂನ್ 10ರಂದು ಯಮನೋತ್ರಿಗೆ ತಲುಪಿದೇವು. ಸುತ್ತಮುತ್ತಲಿರುವ ಧಾರ್ಮಿಕ, ಪ್ರವಾಸಿ ಸ್ಥಳಗಳನ್ನು ನೋಡಿಕೊಂಡು 15ರಂದು ರಾತ್ರಿ 7.30ಕ್ಕೆ ಕೇದಾರನಾಥ ತಲುಪಿದಾಗ ಮಳೆ ಸುರಿಯುತ್ತಿತ್ತು.

ದೇವಸ್ಥಾನದಲ್ಲಿ ಸಾಯಿ ಭಜನೆ ಮಾಡಿ 10.30ಕ್ಕೆ ರಾಮಬಾಡಕ್ಕೆ ಬಂದಾಗ ಮಳೆಯಿಂದ ಜಲಪಾತಗಳು ಸೃಷ್ಟಿಯಾಗಿದ್ದವು. ಆಗಲೇ ಯಾತ್ರಾರ್ಥಿಗಳು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡರು' ಎಂದು ಆರಂಭದ ಕ್ಷಣಗಳನ್ನು ಹೇಳಿದರು.

`ಗುಡ್ಡದ ಮೇಲಿಂದ ಹರಿದು ಬರುತ್ತಿದ್ದ ಮಣ್ಣು ಮಿಶ್ರಿತ ನೀರು ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲವನ್ನು ಕೊಚ್ಚಿಕೊಂಡು ಹೋಗುತ್ತಿತ್ತು. ಆ ಪ್ರವಾಹದಲ್ಲಿ ಸಿಲುಕಿದ್ದ ಅನೇಕರನ್ನು ನಾವು ರಕ್ಷಿಸಿದೇವು. ಆ ಪ್ರದೇಶ ಸುರಕ್ಷಿತವಲ್ಲ ಎಂದುಕೊಂಡು ಮುಂದೆ ಗೌರಿಕುಂಡಕ್ಕೆ ತೆರಳಿ ಅಲ್ಲಿ ಆಶ್ರಯ ಪಡೆದೇವು' ಎಂದರು.

`ಗೌರಿಕುಂಡದ ಸುತ್ತಮುತ್ತ ಭೂಮಿ ಕುಸಿಯುತ್ತಿತ್ತು. ಅಲ್ಲಿರಲು ಮನಸ್ಸಾಗಿರಲಿಲ್ಲ.  ಓಡುತ್ತಲೇ ಎತ್ತರ ಪ್ರದೇಶಕ್ಕೆ ಹೋಗಿ ಆಶ್ರಯ ಪಡೆಯಬೇಕಾಯಿತು. ದಾರಿಯಲ್ಲಿ ಕುದುರೆಗಳು ಸತ್ತು ಬಿದ್ದಿದ್ದವು. ಯಾರೂ ಮುಂದೆ ಹೋಗಲು ಮನಸ್ಸು ಮಾಡುತ್ತಿರಲಿಲ್ಲ. ಅಲ್ಲಿ ನೆಲೆಸಿದ ನಂತರ ಭೂಸೇನೆಯ ಅಧಿಕಾರಿಗಳು ಬಂದು ಇಲ್ಲಿರುವುದು ಸುರಕ್ಷಿತವಲ್ಲ ಎಂದು ಹೇಳಿದ್ದರಿಂದ ಮತ್ತೆ ನಾವು ಸ್ಥಳ ಬದಲಿಸಬೇಕಾಯಿತು. ಆ ರಾತ್ರಿ ಮಿಲಿಟರಿಯವರು ಸಣ್ಣ ಗುಡಿಸಲು ಮಾಡಿಕೊಟ್ಟರು' ಎಂದು ಆತಂಕ ಸಂದರ್ಭವನ್ನು ವಿವರಿಸಿದರು.

`ಮಿಲಿಟರಿಯವರ ಸಹಾಯದಿಂದ ಗುಡ್ಡದಿಂದ ಇಳಿದು ಸೋಮಪ್ರಯಾಗಕ್ಕೆ ಬಂದು ಅಲ್ಲಿಂದ ವಾಹನ ಮಾಡಿಕೊಂಡು ಹರಿದ್ವಾರದ
ಮೂಲಕ ದೆಹಲಿಗೆ ಬಂದು ಕರ್ನಾಟಕ ಭವನದಲ್ಲಿ ಆಶ್ರಯ ಪಡೆದೆವು. ಕರ್ನಾಟಕ ಭವನದ ಸಿಬ್ಬಂದಿ ನಮ್ಮನ್ನು ಚೆನ್ನಾಗಿ ನೋಡಿಕೊಂಡರು' ಎಂದು ಯಾತಾರ್ಥಿಗಳು ತಿಳಿಸಿದರು. ಯಾತ್ರಾರ್ಥಿಗಳು ರಾತ್ರಿ 8ರ ಸುಮಾರಿಗೆ ಹೊನ್ನಾವರ ತಲುಪಿದ ನಂತರ ಸತ್ಯಸಾಯಿ ಸೇವಾ ಸಮಿತಿಯ ಸದಸ್ಯರು ಬರಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.