ADVERTISEMENT

ಮಾರುತಿ ದೇವರ ಜಾತ್ರೆಯಲ್ಲಿ ರಂಗೋಲಿ ರಂಗು

ದೇವರಾಜ ನಾಯ್ಕ
Published 18 ಡಿಸೆಂಬರ್ 2017, 6:02 IST
Last Updated 18 ಡಿಸೆಂಬರ್ 2017, 6:02 IST

ಕಾರವಾರ: ಕ್ರಿಕೆಟ್ ಆಟಗಾರರಾದ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಹಿಂದಿ ನಟ ಶಾಹೀದ್ ಕಪೂರ್, ಬಾಹುಬಲಿ ಚಿತ್ರದ ನಟಿ ಅನುಷ್ಕಾ ಶೆಟ್ಟಿ, ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ ಎಂಬ ಸಂದೇಶ ಸಾರುವ ಚಿತ್ರ, ಜತೆಗೊಂದಿಷ್ಟು ಬಣ್ಣ, ಹೂವುಗಳಿಂದ ಬಿಡಿಸಿದ ಚಿತ್ತಾರ...ಹೀಗೆ ಒಂದೊಂದ ನೋಡ ಹೊರಟರೆ ಮುಗಿಯದ ರಂಗೋಲಿಗಳ ಸಾಲು!

ಇದು ಕಂಡು ಬಂದಿದ್ದು ಇಲ್ಲಿನ ಮಾರುತಿ ದೇವರ ಜಾತ್ರೆಯಲ್ಲಿ. ಜಾತ್ರೆಯ ನಿಮಿತ್ತ ಮಾರುತಿ ಗಲ್ಲಿಯಲ್ಲಿ ರಂಗೋಲಿಗಳನ್ನು ಬಿಡಿಸಿ, ಶನಿವಾರ ರಾತ್ರಿ ಪ್ರದರ್ಶನಕ್ಕೆ ಇಡಲಾಗಿತ್ತು. ಸುಮಾರು 50ಕ್ಕೂ ಅಧಿಕ ವಿವಿಧ ತೆರನಾದ ರಂಗೋಲಿಗಳು ನೋಡುಗರನ್ನು ಆಕರ್ಷಿಸಿತು. ಇದರಿಂದಲೇ ಈ ಜಾತ್ರೆಯು ‘ರಂಗೋಲಿ ಜಾತ್ರೆ’ ಎಂದು ಪ್ರಸಿದ್ಧಿಯೂ ಕೂಡ ಪಡೆದಿದೆ.

ಮಾರುತಿ ಗಲ್ಲಿ ಮಾತ್ರವಲ್ಲದೇ ಅಕ್ಕಪಕ್ಕದ ರಸ್ತೆಗಳ ಇಕ್ಕೆಲಗಳಲ್ಲಿಯೂ ರಂಗೋಲಿಯ ರಂಗು ಚೆಲ್ಲಿತ್ತು. ಸಾವಿರಾರು ಜನರು ಕಾಲ್ನಡಿಗೆಯಲ್ಲಿ ಸಾಗಿ ಈ ರಂಗೋಲಿಯ ಸೊಬಗನ್ನು ಕಣ್ತುಂಬಿಕೊಂಡರು. ಜತೆಗೆ ತಮ್ಮ ಮೊಬೈಲ್‌ ತೆಗೆದು ಫೋಟೊ ಕ್ಲಿಕ್ಕಿಸಿದರು.

ADVERTISEMENT

ಗಲ್ಲಿಯ ನಿವಾಸಿಗಳು ಹೊಸ ಉಡುಪುಗಳನ್ನು ತೊಟ್ಟು ಹಬ್ಬದಂತೆ ಸಂಭ್ರಮಿಸಿದರು. ರಾತ್ರಿ 9 ಗಂಟೆಯ ವೇಳೆಗೆ ದೇವರ ಪಲ್ಲಕ್ಕಿಯು ಈ ಎಲ್ಲ ರಸ್ತೆಯಲ್ಲೂ ಸಂಚರಿಸಿತು. ಈ ಸಂದರ್ಭದಲ್ಲಿ ಜನರು ಮನೆಯ ಮುಂದೆ ದೀಪ ಬೆಳಗಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಜತೆಗೆ ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದ್ದ ದೇಗುಲಕ್ಕೂ ಭಕ್ತರು ಭೇಟಿ ನೀಡಿ, ದೇವರ ದರ್ಶನ ಪಡೆದರು.

‘ತಲೆತಲಾಂತರಗಳಿಂದ ಈ ಭಾಗದಲ್ಲಿ ಪ್ರತಿವರ್ಷ ಮಾರುತಿ ದೇವರ ಜಾತ್ರಾ ಮಹೋತ್ಸವ ನಡೆಯುತ್ತದೆ. ರಂಗೋಲಿ ಪ್ರದರ್ಶನವೇ ಇದರ ಕೇಂದ್ರ ಬಿಂದು. ದೇವರ ದರ್ಶನದ ಜತೆಗೆ ಇಲ್ಲಿ ತರಹೇವಾರಿ ರಂಗೋಲಿ ಚಿತ್ರಗಳು ಕಣ್ಮನಸೆಳೆಯುತ್ತವೆ. ಹೀಗಾಗಿ ಪ್ರತಿವರ್ಷ ತಪ್ಪದೇ ಜಾತ್ರೆಗೆ ಬರುತ್ತೇವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಅಂಕಿತಾ ನಾಯ್ಕ.

ವಿವಿಧ ಕಲೆ

ರಂಗೋಲಿ ಪುಡಿ, ಅರಳುಪ್ಪು, ಪುಡಿ ಉಪ್ಪು, ಧಾನ್ಯ, ಹೂವಿನ ದಳ ಹಾಗೂ ತರಕಾರಿಯಿಂದ ಕಲಾವಿದರು ಅನೇಕ ವೈವಿಧ್ಯಮಯ ಚಿತ್ರ ರಚಿಸಿದ್ದರು. ಸಾಧಕರು, ಮಹನೀಯರ ಭಾವಚಿತ್ರಗಳು ಇಲ್ಲಿ ಅರಳಿದ್ದವು. ಯಶಶ್ರೀ ಕೊಚ ರೇಕರ್ ರಚಿತ ಹೆಣ್ಣು ಭ್ರೂಣ ಹತ್ಯೆ ತಡೆಯಿರಿ ಎಂಬ ಸಂದೇಶ ಸಾರುತಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.