ADVERTISEMENT

ಮಾ. 31ರೊಳಗೆ ಎಲ್ಲ ಕಬ್ಬಿನ ಸಾಗಾಣಿಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 7:25 IST
Last Updated 1 ಫೆಬ್ರುವರಿ 2011, 7:25 IST

ಹಳಿಯಾಳ: ಇಲ್ಲಿನ ಹುಲ್ಲಟ್ಟಿಯಲ್ಲಿರುವ ಜಿ.ಎಮ್.ಆರ್ ಇಐಡಿ ಪ್ಯಾರಿ ಕಂಪೆನಿಯ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಲು ಮಧ್ಯವರ್ತಿಗಳು ಒಂದು ಲಾರಿಗೆ 4ರಿಂದ 8 ಸಾವಿರ ರೂಪಾಯಿ ಆಕರಣೆ ಮಾಡುವುದನ್ನು ನಿಲ್ಲಿಸಬೇಕು ಹಾಗೂ ತಾಲ್ಲೂಕಿನ ಕಬ್ಬನ್ನು ನುರಿಸಲು ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ  ಸೋಮವಾರ ಸಂಜೆ ತಹಸೀಲ್ದಾರ ಕಚೇರಿಗೆ ನೂರಾರು ಕಬ್ಬು ಬೆಳೆಗಾರರು ಮುತ್ತಿಗೆ ಹಾಕಿದರು.

ವಿಷಯ ತಿಳಿದ ತಹಸೀಲ್ದಾರರು, ಕೂಡಲೇ ಜಿ.ಎಮ್.ಆರ್ ಇಐಡಿ ಪ್ಯಾರಿ ಕಂಪೆನಿಯ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಕಾರಿಗಳನ್ನು ಮತ್ತು ಕಬ್ಬು ಬೆಳೆಗಾರರ ಮುಖಂಡರ ಜೊತೆ ಸಭೆ ನಡೆಸಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಚರ್ಚಿಸಿದರು.

ಸಭೆಯಲ್ಲಿ ಜಿ.ಎಮ್.ಆರ್ ಇಐಡಿ ಪ್ಯಾರಿ ಕಂಪೆನಿಯ ಅಧಿಕಾರಿ ಕಣ್ಣನ್, ಕಾರ್ಖಾನೆಯ ಸಿಬ್ಬಂದಿಗಳಲ್ಲಿ ಯಾರಾದರೂ ಕಬ್ಬು ಬೆಳೆದ ರೈತರಿಂದ ಕಟಾವು ಮಾಡಲಿಕ್ಕೆ ಅಥವಾ ಸಾಗಾಣಿಕೆ ಮಾಡಲು ಹಣವನ್ನು ಲಂಚದ ರೂಪದಲ್ಲಿ ಕೇಳಿದ್ದರೆ ತಕ್ಷಣ ನನಗೆ ತಿಳಿಸಿ. ಅಂಥವರನ್ನು ಕಂಪೆನಿಯಿಂದ ಅಮಾನತುಗೊಳಿಸಲಾಗುವುದು’ ಎಂದು ಹೇಳಿದರು.

‘ಬರುವ ಮಾರ್ಚ್ 31ರೊಳಗೆ ಹಳಿಯಾಳ ಹಾಗೂ ಸುತ್ತಲಿನ ತಾಲ್ಲೂಕಿನ ಬೆಳೆಗಾರರ ಪ್ರತಿಯೊಂದು ಕಬ್ಬನ್ನೂ ಸಾಗಾಣಿಕೆ ಮಾಡಲಾಗುವುದು. ತಾಲ್ಲೂಕಿನಲ್ಲಿ ಕಬ್ಬು ಕಟಾವು ಮಾಡಲು ಜನರು ಸಿದ್ಧರಿದ್ದರೆ ಕಂಪೆನಿಯಿಂದ ಅವರಿಗೆ ಮುಂಗಡವಾಗಿ ಹಣ ನೀಡಲಾಗುವುದು. ಹೊರಗಿನಿಂದ ಬಂದ ತೋಡ್ನಿ ತಂಡಗಳನ್ನು ವಾಪಸ್ ಕಳುಹಿಸಲಾಗುವುದು’ ಎಂದು ಹೇಳಿದರು.

ಕಾರ್ಖಾನೆಯಲ್ಲಿ ವಿದ್ಯುತ್ ಟ್ರಿಪ್ ಆಗಿದ್ದರಿಂದ 90 ಗಂಟೆಗಳ ಕಾಲ ಕಾರ್ಖಾನೆ ಬಂದ್ ಆಗಿತ್ತು. ಇದರಿಂದ ರೈತರಿಗೆ ಅನಾನುಕೂಲವಾಗಿದೆ. ಕಾರ್ಖಾನೆಯಲ್ಲಿ ನೋಂದಣಿ ಮಾಡಿಸಿದ ಪ್ರತಿಯೊಬ್ಬ ರೈತರ ಕಬ್ಬನ್ನು ತೆಗೆದುಕೊಳ್ಳುತ್ತಿದ್ದೇವೆ. ಮುಂಬರುವ ಸಾಲಿನಲ್ಲಿ ಯಾವುದೇ ರೀತಿಯಿಂದ ಬೆಳೆಗಾರರಿಗೆ ಕಬ್ಬು ಕಟಾವು ಹಾಗೂ ಸಾಗಾಣಿಕೆಯಲ್ಲಿ ತೊಂದರೆಯಾಗದಂತೆ ಎಚ್ಚರ ವಹಿಸುತ್ತೇವೆ ಎಂದು ಭರವಸೆ ನೀಡಿದರು.

ತಹಸೀಲ್ದಾರ ಎ.ಆರ್. ದೇಸಾಯಿ, ಕಬ್ಬು ಬೆಳೆಗಾರರು ತಾವು ಬೆಳೆದ ಕಬ್ಬನ್ನು ಕಾರ್ಖಾನೆಯಲ್ಲಿ ನೋಂದಣಿ ಮಾಡಿಸಿ, ಅದರಂತೆ ಕಬ್ಬು ನುರಿಸಿರಿ. ಪ್ರತಿಯೊಂದು ಪಂಚಾಯಿತಿಯಲ್ಲೂ ಅದರ ವ್ಯಾಪ್ತಿಯ ಕಬ್ಬು ಸಾಗಾಣಿಕೆಯ ನಂಬರನ್ನು ಹಚ್ಚಿಡಿ. ಇದರಿಂದ ರೈತರಿಗೂ ಅನುಕೂಲವಾಗುತ್ತದೆ ಎಂದರು.ಸಿ.ಪಿ.ಐ. ಉಮೇಶ ಶೇಟ್, ಪಿ.ಎಸ್.ಐ. ಅನಿಸ ಮುಜಾವರ, ಹಳಿಯಾಳ, ಧಾರವಾಡ, ಅಳ್ನಾವರ, ಕಲಘಟಗಿ ಮತ್ತಿತರ ಭಾಗದ ಕಬ್ಬು ಬೆಳೆಗಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.