ADVERTISEMENT

ಮಾ.3ಕ್ಕೆ ಜನಸುರಕ್ಷಾ ಯಾತ್ರೆ ಆರಂಭ

ಬಿಜೆಪಿ ಕಾರ್ಯಕರ್ತರ ಕೊಲೆ ಮತ್ತು ಹಲ್ಲೆ ಖಂಡಿಸಿ ನಾಲ್ಕು ಜಿಲ್ಲೆಗಳಲ್ಲಿ ಬಿಜೆಪಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 11:04 IST
Last Updated 1 ಮಾರ್ಚ್ 2018, 11:04 IST

ಮಂಗಳೂರು: ರಾಜ್ಯದಲ್ಲಿ ಹಿಂದುತ್ವ ಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆ, ಅವರ ಮೇಲಿನ ಹಲ್ಲೆಗಳನ್ನು ಖಂಡಿಸಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಜನಸುರಕ್ಷಾ ಯಾತ್ರೆ ಮಾರ್ಚ್‌ 3ರಂದು ಬೆಳಿಗ್ಗೆ 10 ಗಂಟೆಗೆ ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಿಂದ ಏಕಕಾಲಕ್ಕೆ ಆರಂಭವಾಗಲಿದೆ. ಮಾ.6ಕ್ಕೆ ಮಂಗಳೂರು ಚಲೋ ಸಮಾವೇಶದೊಂದಿಗೆ ಮುಕ್ತಾಯವಾಗಲಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲ್‌, ‘ಕುಶಾಲನಗರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಯಾತ್ರೆಗೆ ಚಾಲನೆ ನೀಡುವರು. ನಾನು ಹಾಗೂ ಕೊಡಗು– ಮೈಸೂರು ಸಂಸದ ಪ್ರತಾಪ್‌ ಸಿಂಹ ಯಾತ್ರೆಯ ನೇತೃತ್ವ ವಹಿಸಲಿದ್ದೇವೆ. ಅಂಕೋಲಾದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್‌ ಚಾಲನೆ ನೀಡುವರು. ಅಲ್ಲಿಂದ ಹೊರಡುವ ಯಾತ್ರೆಯ ನೇತೃತ್ವವನ್ನು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತು ಉಡುಪಿ– ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಹಿಸಲಿದ್ದಾರೆ’ ಎಂದರು.

ಅಂಕೋಲಾದಿಂದ ಹೊರಡುವ ಯಾತ್ರೆಯು ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಭಟ್ಕಳ, ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಉಡುಪಿ, ಕಾಪು ಮಾರ್ಗವಾಗಿ ಮಾ.6ಕ್ಕೆ ಮಂಗಳೂರಿನ ಜ್ಯೋತಿ ವೃತ್ತಕ್ಕೆ ಬರಲಿದೆ. ಕುಶಾಲನಗರದಿಂದ ಹೊರಡುವ ಯಾತ್ರೆಯು ಕೊಡಗು ಜಿಲ್ಲೆಯ ಮಡಿಕೇರಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಮಾಣಿ, ಬಿ.ಸಿ.ರೋಡ್, ಮೂಡುಬಿದಿರೆ, ಬೈಕಂಪಾಡಿ, ಕದ್ರಿ ದೇವಸ್ಥಾನದ ಮಾರ್ಗವಾಗಿ ಮಾ.6ಕ್ಕೆ ಜ್ಯೋತಿ ವೃತ್ತಕ್ಕೆ ಬರಲಿದೆ. ಅಲ್ಲಿಂದ ಎರಡೂ ಯಾತ್ರೆಗಳು ಒಟ್ಟಾಗಿ ನೆಹರೂ ಮೈದಾನ ತಲುಪಲಿವೆ ಎಂದು ವಿವರಿಸಿದರು.

ADVERTISEMENT

ಮಾ.6ರ ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾರೋಪ ಭಾಷಣ ಮಾಡುವರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳುವರು. ಎಲ್ಲ ಪ್ರಮುಖ ಪಟ್ಟಣಗಳಲ್ಲಿ ನಾಲ್ಕು ಕಿ.ಮೀ. ಪಾದಯಾತ್ರೆ ಮತ್ತು ಸಮಾವೇಶ ನಡೆಯಲಿದೆ. ಐದರಿಂದ ಹತ್ತು ಸಾವಿರ ಜನರು ಪಾದಯಾತ್ರೆಯಲ್ಲಿ ಭಾಗವಹಿಸುವರು. ಸಮಾರೋಪ ಸಮಾರಂಭದಲ್ಲಿ 20,000 ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದ್ದೆ. ಪಿಎಫ್‌ಐ ಕಾರ್ಯಕರ್ತರ ವಿರುದ್ಧದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದಿದೆ. ಗೋಹಂತಕರು ಮತ್ತು ಗೋವುಗಳ ಕಳ್ಳಸಾಗಣೆ ಮಾಡುವವರಿಗೆ ಉತ್ತೇಜನ ನೀಡಿದೆ. ಇದರಿಂದಾಗಿ ನಾಲ್ಕು ವರ್ಷಗಳಲ್ಲಿ 15 ಮಂದಿ ಹಿಂದುತ್ವ ಪರ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆಗಳು ನಡೆದಿವೆ. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ’ ಎಂದು ನಳಿನ್‌ಕುಮಾರ್ ಆರೋಪಿಸಿದರು.

ಪಿಎಫ್‌ಐ ಮತ್ತು ಎಸ್‌ಡಿಪಿಐ ನಿಷೇಧಿಸುವುದು, ಹಿಂದುತ್ವ ಪರ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆ, ಅವರ ಮೇಲಿನ ಹಲ್ಲೆ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವುದು ಹಾಗೂ ಸಮಾಜಘಾತುಕ ಸಂಘಟನೆಗಳು, ಕೋಮು ಹಿಂಸೆಗೆ ಪ್ರಚೋದನೆ ನೀಡುವ ಸಚಿವರನ್ನು ವಜಾಗೊಳಿಸುವಂತೆ ಯಾತ್ರೆ ಯಲ್ಲಿ ಆಗ್ರಹಿಸಲಾಗುವುದು ಎಂದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು, ಪ್ರಧಾನ ಕಾರ್ಯದರ್ಶಿಗಳಾದ ಬೃಜೇಶ್ ಚೌಟ, ರಾಕೇಶ್ ರೈ, ಸುದರ್ಶನ್ ಮೂಡುಬಿದಿರೆ, ಮುಖಂಡರಾದ ಮೋನಪ್ಪ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.