ADVERTISEMENT

ಮೀರತ್‌ನಲ್ಲಿ ನಾಗರಾಜ ಬಂಗಾರದ

ಅಂತರ ವಿವಿ ಕುಸ್ತಿ ಸ್ಪರ್ಧೆ: ನಾಲ್ಕು ದಶಕಗಳ ನಂತರ ಚಿನ್ನದ ಸವಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 9:01 IST
Last Updated 3 ಜನವರಿ 2014, 9:01 IST

ಹುಬ್ಬಳ್ಳಿ:ಅಖಿಲ ಭಾರತ ಅಂತರ ವಿವಿ ಕುಸ್ತಿ ಪಂದ್ಯಾವಳಿಯಲ್ಲಿ ಧಾರವಾಡದ ಕರ್ನಾಟಕ ವಿವಿಗೆ ಸುಮಾರು ನಾಲ್ಕು ದಶಕದ ನಂತರ ಚಿನ್ನದ ಪದಕ ಒಲಿದು ಬಂದಿದೆ. ಧಾರವಾಡ ಜೆಎಸ್‌ಎಸ್‌ ಕಾಲೇಜಿನ ಬಿಎ ನಾಲ್ಕನೇ ಸೆಮಿಸ್ಟರ್‌ ವಿದ್ಯಾರ್ಥಿ ನಾಗರಾಜ ಎಂ. ಉತ್ತರ ಪ್ರದೇಶದ ಮೀರತ್‌ನ ಚೌಧರಿ ಚರಣ್‌ ಸಿಂಗ್‌ ವಿಶ್ವವಿದ್ಯಾಲಯ ಆವರಣದಲ್ಲಿ ಗುರುವಾರ ಆರಂಭಗೊಂಡ ಚಾಂಪಿಯನ್‌ಷಿಪ್‌ನಲ್ಲಿ ಜಯ ಸಾಧಿಸಿ ಈ ಸಾಧನೆಗೆ ಕಾರಣರಾದರು. ಈ ಹಿಂದೆ 70ರ ದಶಕದಲ್ಲಿ ಸಿದ್ದರಾಮ ಕಲೂತಿ ಅವರು ಧಾರವಾಡ ವಿವಿ ಪರವಾಗಿ ಚಿನ್ನ ಗೆದ್ದುಕೊಂಡಿದ್ದರು.

ಗುರುವಾರ ನಡೆದ 60 ಕೆಜಿ ವಿಭಾಗದವರ ಸ್ಪರ್ಧೆಯಲ್ಲಿ ಆತಿಥೇಯ ವಿವಿಯ ಕೃಷ್ಣ ಕುಮಾರ್‌ ವಿರುದ್ಧ 4–2 ಪಾಯಿಂಟ್‌ಗಳಿಂದ ನಾಗರಾಜ ಗೆಲುವು ದಾಖಲಿಸಿದರು. ಎರಡು ವರ್ಷಗಳಿಂದ ದಸರಾ ಕುಮಾರ್‌ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿರುವ ಇವರು ಎರಡು ವರ್ಷಗಳ ಹಿಂದೆ ದಸರಾ ಕಿಶೋರ ಪ್ರಶಸ್ತಿಯನ್ನೂ ಗೆದ್ದಿದ್ದರು.

ನಾಗರಾಜ ಧಾರವಾಡ ಸಾಯ್‌ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಚಾಂಪಿಯನ್‌ಷಿಪ್‌ನ 50 ಕೆಜಿ ವಿಭಾಗದಲ್ಲಿ ಗುಲ್ಬರ್ಗ ವಿವಿಯ ಮಂಜುನಾಥ ಮಾದರ ಬೆಳ್ಳಿ ಹಾಗೂ ಬೆಳಗಾವಿ ರಾಣಿ ಚನ್ನಮ್ಮ ವಿವಿಯ ಸದಾಶಿವ ಗುಂಡಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ ಎಂದು ಧಾರವಾಡ ವಿವಿ ತಂಡದ ವ್ಯವಸ್ಥಾಪಕ ಬಿ.ಎಂ.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.